ಕಲಬುರಗಿ, ಮಾ.06 (DaijiworldNews/PY) : "ಕಾಂಗ್ರೆಸ್ ಹೀನಾಯ ಸ್ಥಿತಿಯಲ್ಲಿ ಇದ್ದು, ಇನ್ನು 20 ವರ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲ್ಲ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬಿಜೆಪಿ ಸೇರಿದರೆ ಕೇಂದ್ರದಲ್ಲಿ ಸಚಿವರಾಗುತ್ತಾರೆ" ಎಂದು ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ, ಬಿಜೆಪಿ ಮುಖಂಡ ಬಾಬುರಾವ್ ಚಿಂಚನಸೂರ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕಾಂಗ್ರೆಸ್ನಲ್ಲಿ ಡಿ.ಕೆ.ಶಿವಕುಮಾರ್ ಹಾಗೂ ಜಿ.ಪರಮೇಶ್ವರ್ ಅವರಿಗೆ ಸಿದ್ದರಾಮಯ್ಯ ಅವರನ್ನು ಕಂಡರೆ ಆಗಲ್ಲ. ಅದೇ ರೀತಿ ಸಿದ್ದರಾಮಯ್ಯ ಅವರಿಗೆ ಇವರಿಬ್ಬರನ್ನು ಕಂಡರೆ ಆಗಲ್ಲ. ಹಾಗಾಗಿ ಸಿದ್ದರಾಮಯ್ಯ ಅವರು ತಮ್ಮ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಪರ್ಯಾಯ ಮಾರ್ಗ ಹುಡುಕುತ್ತಿದ್ದಾರೆ. ಅವರು ಬಿಜೆಪಿಗೆ ಸೇರಿದರೆ ಸ್ವಾಗತಿಸುತ್ತೇವೆ" ಎಂದರು.
"ರಾಜ್ಯ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್ಗೆ ನಾಯಕತ್ವ ಇಲ್ಲ. ಬಿಜೆಪಿಗೆ ಸೇರಲು ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಸೇರಲು ತುದಿಗಾಲಿನಲ್ಲಿ ನಿಂತಿದ್ಧಾರೆ. ಬಿಜೆಪಿ ಹೈಕಮಾಂಡ್ ಶಾಸಕರ ಸೇರ್ಪಡೆಗೆ ಅನುಮತಿ ನೀಡಿದರೆ ಎರಡೂ ಪಕ್ಷಗಳು ವೈಟ್ ವಾಶ್ ಆಗುತ್ತವೆ" ಎಂದು ಹೇಳಿದರು.
"ಬಿಜೆಪಿಗೆ ಸೇರಲು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಬಯಸುತ್ತಿದ್ದಾರೆ. ನಾನೇ ಖುದ್ದಾಗಿ ಬೀದರ್ ಶಾಸಕರೊಬ್ಬರನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಳಿ ಕರೆದುಕೊಂಡು ಹೋಗಿ ಭೇಟಿ ಮಾಡಿಸಿದ್ದೇನೆ" ಎಂದು ತಿಳಿಸಿದರು.