ಚಿತ್ರದುರ್ಗ, ಮಾ 6 (Daijiworld News/MSP): ಆಸ್ತಿಯ ಆಸೆಗಾಗಿ ಚಿಕ್ಕಪ್ಪನೇ ತನ್ನ ಅಣ್ಣನ ಮಗನಾದ ಏಳು ವರ್ಷದ ಬಾಲಕನನ್ನು ನೀರಿನಲ್ಲಿ ಮುಳುಗಿಸಿ ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬೋಸೇದೇವರಹಟ್ಟಿ ಗ್ರಾಮದಲ್ಲಿ ಘಟನೆ ನಡೆದಿದೆ.
ರಂಗಸ್ವಾಮಿಯ ಪುತ್ರ ಏಳು ವರ್ಷದ ಗೋವಿಂದ್ ತನ್ನ ಸ್ವಂತ ಚಿಕ್ಕಪ್ಪನಿಂದಲೇ ಹತ್ಯೆಯಾದ ದುರ್ದೈವಿಯಾಗಿದ್ದಾನೆ. ರಂಗಸ್ವಾಮಿ ಸಹೋದರ ಬಾಳಕನ ಚಿಕ್ಕಪ್ಪ ಚಿರಂಜೀವಿಯು ಬಾಲಕ ಗೋವಿಂದನಿಗೆ ಪಾರಿವಾಳ ತೋರಿಸಿ ಕರೆದೊಯ್ದು ನೀರಿನಲ್ಲಿ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ. ಬಳಿಕ ಮೃತ ದೇಹವನ್ನು ಗೋಣಿ ಚೀಲದಲ್ಲಿ ಕಟ್ಟಿಕೊಂಡು ಗ್ರಾಮದ ಹೊರವಲಯದ ಹಳ್ಳದಲ್ಲಿ ಬಿಸಾಕಿದ್ದಾನೆ.
ಚಿರಂಜೀವಿ ಹಾಗೂ ರಂಗಸ್ವಾಮಿಯ ಇವರ ತಂದೆ ಬಾಲಕನ ಅಜ್ಜ ಒಮ್ಮೆ ಕೋಪದಲ್ಲಿ ಮಕ್ಕಳಿಬ್ಬರಿಗೂ ಆಸ್ತಿ ಹಂಚದೆ , ಮೊಮ್ಮಗ ಗೋವಿಂದನ ಹೆಸರಿಗೆ ಬರೆಯುತ್ತೇನೆ ಎಂದಿದ್ದರು, ಇದೇ ವಿಚಾರವನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಚಿರಂಜೀವಿ ಆಸ್ತಿ ಕೈ ತಪ್ಪುತ್ತದೆ ಎಂಬ ಭಯದಿಂದ ಅಣ್ಣನ ಮಗ ಗೋವಿಂದನನ್ನು ಕೊಲೆ ಮಾಡಿದ್ದಾನೆ ಎಂದು ಗೋವಿಂದ್ ತಂದೆ ರಂಗಸ್ವಾಮಿ ಹೇಳಿದ್ದಾನೆ.
ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿರುವ ಪೊಲೀಸರು ಆರೋಪಿ ಚಿರಂಜೀವಿಯನ್ನು ವಶಕ್ಕೆ ಪಡೆದಿದ್ದಾರೆ. ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.