ಬೆಂಗಳೂರು, ಮಾ.06 (DaijiworldNews/PY) : ಕೆಲವು ತಿಂಗಳುಗಳ ಹಿಂದೆ ಮೈಸೂರಿನಲ್ಲಿ ಮಾಜಿ ಸಚಿವ, ಶಾಸಕ ತನ್ವೀರ್ ಸೇಟ್ ಹತ್ಯೆಯ ಯತ್ನದ ಬೆನ್ನಲ್ಲೇ ಇದೀಗ ಮಾಜಿ ಸಚಿವ ಯು.ಟಿ.ಖಾದರ್ ಅವರ ಕೊಲೆಗೆ ಸಂಚು ರೂಪಿಸಿರುವುದು ಗುಪ್ತಚರ ಇಲಾಖೆಯಿಂದ ಸರ್ಕಾರಕ್ಕೆ ಮಾಹಿತಿ ಬಂದಿದೆ. ಹಾಗಾಗಿ ಜೀವ ಬೆದರಿಕೆ ಹಿನ್ನೆಲೆಯಲ್ಲಿ ಖಾದರ್ ಅವರಿಗೆ ರಾಜ್ಯ ಸರ್ಕಾರ ಭದ್ರತೆ ನೀಡಿದೆ. ಆದರೆ ಖಾದರ್ ಅವರು ತನಿಖೆಗೆ ಸೂಕ್ತ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿಲ್ಲ ಎಂದು ಗೃಹಸಚಿವರ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಬಸವರಾಜ್ ಬೊಮ್ಮಾಯಿ ಅವರು, ಆರೋಪಿಗಳನ್ನು ಪತ್ತೆ ಹಚ್ಚಲು ಮಾಜಿ ಸಚಿವ ಯು.ಟಿ. ಖಾದರ್ ಅವರು ಸಹಕರಿಸಬೇಕು ಈ ಹಿಂದೆ ಬಂದಿರೋ ಮಾಹಿತಿ ಆದು. ಈ ಬಗ್ಗೆ ಅವರು ಸರಿಯಾಗಿ ಸಹಕರಿಸಬೇಕು. ಕರೆ ಅಥವಾ ಬೆದರಿಕೆ ಎಲ್ಲಿಂದ? ಯಾವಾಗ? ಏನು ಅಂತ ಬಂದಿದೆ ಎಂಬ ಎಲ್ಲ ಮಾಹಿತಿಯನ್ನ ಕೊಡಬೇಕು ಎಂದರು
ಮಾಜಿ ಸಚಿವ ಯು.ಟಿ. ಖಾದರ್ ಅವರಿಗೆ ಭದ್ರತೆ ಹೆಚ್ಚಿಸಲಾಗಿದೆ. ಸರ್ಕಾರದಿಂದ ಗನ್ಮ್ಯಾನ್ ಒದಗಿಸಲಾಗಿದ್ದು, ಕೆಲ ತಿಂಗಳುಗಳ ಹಿಂದೆ ಗೃಹಸಚಿವ ಬಸವರಾಜ್ ಬೊಮ್ಮಾಯಿ ಅವರು ಗುಪ್ತಚರ ಇಲಾಖೆ ಮಾಹಿತಿ ಪ್ರಕಾರ ನಿಮ್ಮ ಜೀವಕ್ಕೆ ಅಪಾಯವಿದೆ ಎಂದಿದ್ದರು.
ಈ ವಿಚಾರದ ಬಗ್ಗೆ ಸರಿಯಾಗಿ ಮಾಹಿತಿ ನೀಡಿದರೆ ನಮ್ಮ ಪೊಲೀಸರು ಅವರನ್ನ ಪತ್ತೆ ಹಚ್ಚುತ್ತಾರೆ ಎಂದರು. ಆ ಮೂಲಕ ಮಾಜಿ ಸಚಿವ ಯು.ಟಿ. ಖಾದರ್ ಅವರು ತನಿಖೆಗೆ ಸಹಕರಿಸುತ್ತಿಲ್ಲ ಎಂದು ಪರೋಕ್ಷವಾಗಿ ಹೇಳಿಕೆ ನೀಡಿದ್ದಾರೆ.
ನಾನೇನೋ ಜನಪ್ರತಿನಿಧಿ. ಆದರೆ, ಜನಸಾಮಾನ್ಯರಿಗೆ ಈ ರೀತಿ ಆದರೆ ಯಾರ ಜವಾಬ್ದಾರಿ? ಕೇವಲ ಹೆಸರಿಗೆ ಮಾತ್ರ ಭದ್ರತೆ ಆಗಬಾರದು. ಕೂಲಿ ಕಾರ್ಮಿಕನ ಜೀವಕ್ಕೂ ಬೆಲೆ ಇದೆ. ಎಲ್ಲರೂ ನಿರ್ಭಯವಾಗಿ ಜೀವಿಸುವಂತಾಗಬೇಕು. ಈ ಪ್ರಕರಣ ಹಿಂದೆ ಯಾರಿದ್ದಾರೆ, ಯಾರು ಹಣ ನೀಡಿದ್ರು ಅನ್ನೋದನ್ನ ಮೊದಲು ಪೊಲೀಸ್ ಇಲಾಖೆ ಪತ್ತೆ ಹಚ್ಚಲಿ ಎಂದು ಯು.ಟಿ. ಖಾದರ್ ಹೇಳಿದ್ಧಾರೆ.
ತಮ್ಮ ಮೇಲೆ ಹಲ್ಲೆ ಮಾಡಿದ ವ್ಯಕ್ತಿಯನ್ನು ಮಾತ್ರ ಪೊಲೀಸರು ಬಂಧಿಸಿದ್ದಾರೆಂದು ಮಾಜಿ ಸಚಿವ ತನ್ವೀರ್ ಸೇಠ್ ಪೊಲೀಸರ ಮೇಲೆ ಅಸಮಾಧಾನ ಹೊರಹಾಕಿದ್ದಾರೆ. ಪ್ರಕರಣದ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ತನಿಖೆ ಸೂಕ್ತವಾಗಿ ನಡೆಯುತ್ತಿಲ್ಲ. ನನ್ನ ಮೇಲೆ ನಡೆಸಿದ ಹಲ್ಲೆಯ ಉದ್ದೇಶವನ್ನು ಪತ್ತೆ ಮಾಡಬೇಕು ಎಂದು ಗೃಹಸಚಿವ ಬೊಮ್ಮಾಯಿ ಅವರಿಗೆ ಬರೆದಿರುವ ಪತ್ರದಲ್ಲಿ ತನ್ವೀರ್ ಸೇಠ್ ಅವರು ಉಲ್ಲೇಖಿಸಿದ್ದಾರೆ.
ಶಾಸಕರನ್ನೇ ಹತ್ಯಾ ಯತ್ನಕ್ಕೆ ಪ್ರಯತ್ನಿಸಿರುವುದು, ಕೊಲೆಗೆ ಸಂಚು ರೂಪಿಸುತ್ತಿರುವುದು ಆತಂಕಕಾರಿ ವಿಚಾರ. ಸರ್ಕಾರ ಪಕ್ಷಬೇಧ ಬಿಟ್ಟು ತನಿಖೆ ನಡೆಸಬೇಕು. ಭದ್ರತೆ ವಿಚಾರದಲ್ಲಿ ಯಾವುದೇ ಹೊಂದಾಣಿಕೆ ಮಾಡಿಕೊಳ್ಳುವುದು ಬೇಡ ಎಂದು ಶಾಸಕರು ತಿಳಿಸಿದ್ದಾರೆ.