ಬಳ್ಳಾರಿ, ಮಾ 6 (Daijiworld News/MSP): ಜಿಲ್ಲೆಯಲ್ಲೂ ಶಂಕಿತ ಕೊರೊನಾ ವೈರಸ್ ಪತ್ತೆಯಾಗಿದ್ದು, ಮೂವರ ರಕ್ತದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಸ್ಪಷ್ಟಪಡಿಸಿದರು. ತಮ್ಮ ಹೋಟಲ್ಗಳಿಗೆ ದೇಶ ಮತ್ತು ವಿದೇಶಗಳಿಂದ ಆಗಮಿಸುವ ಪ್ರವಾಸಿಗರ ಮಾಹಿತಿಯನ್ನು ತತ್ಕ್ಷಣ ಗಮನಕ್ಕೆ ತರುವ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಹೋಟಲ್ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕರೋನಾ ವೈರಸ್ಗೆ ಸಂಬಂಧಿಸಿದಂತೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲೆಯ ಹೋಟಲ್ ಮಾಲೀಕರೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದೇಶದ ವಿವಿಧ ರಾಜ್ಯಗಳ ಹಾಗೂ ವಿದೇಶಗಳ ಮತ್ತು ಅದರಲ್ಲೂ ವಿಶೇಷವಾಗಿ ಕರೋನಾ ಸೊಂಕು ಕಂಡುಬಂದ ದೇಶಗಳಿಂದ ಬಂದ ಪ್ರವಾಸಿಗರ ಮಾಹಿತಿಯನ್ನು ತತ್ಕ್ಷಣ ನೀಡಲೇಬೇಕು ಎಂದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಜನಸ್ಪಂದನಾ ಕೇಂದ್ರಕ್ಕೆ ಮಾಹಿತಿ ನೀಡಬಹುದಾಗಿದೆ.
ಈ ಕೇಂದ್ರದ ರೂಂ ಮೊ.ನಂ:8277888866 ಹಾಗೂ ದೂ:08392-277100ಗೆ ಕರೆ ಮಾಡಬಹುದು ಮತ್ತು ವಾಟ್ಸ್ಆ್ಯಪ್ ಮಾಡಬಹುದು.1077 ಉಚಿತ ಸಹಾಯವಾಣಿಗೂ ಕರೆ ಮಾಡಿ ಮಾಹಿತಿ ನೀಡಬಹುದು. ಈ ಕೇಂದ್ರದಲ್ಲಿ ವೈದ್ಯಕೀಯ ಸಿಬ್ಬಂದಿ ಲಭ್ಯವಿರುತ್ತಾರೆ ಎಂದು ತಿಳಿಸಿದ ಅವರು ನಿರಂತರವಾಗಿ 24 ಗಂಟೆಗಳ ಕಾಲ ಈ ಕೇಂದ್ರದಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಅವರು ತಿಳಿಸಿದರು.
ಕರೋನಾ ವೈರಸ್ಗೆ ಸಂಬಂಧಿಸಿದ ಲಕ್ಷಣಗಳ ಬಗ್ಗೆ ಸಭೆಯಲ್ಲಿ ವಿವರಿಸಿದ ಡಿಸಿ ನಕುಲ್ ಅವರು ಈ ರೀತಿಯ ಲಕ್ಷಣಗಳು ಪ್ರವಾಸಿಗರಲ್ಲಿ ಕಂಡುಬಂದಲ್ಲಿಯೂ ಸಹ ಮಾಹಿತಿ ನೀಡಿ; ಇದಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಭಯಬೇಡ;ಜಾಗೃತಿಯಿರಲಿ ಎಂದರು.
ಕರೋನಾ ವೈರಸ್ ಮತ್ತು ಅದರ ಲಕ್ಷಣಗಳ ಕುರಿತ ಕರಪತ್ರಗಳು ವಿತರಿಸಬೇಕು ಹಾಗೂ ಬೃಹತ್ ಫಲಕಗಳನ್ನು ಹೋಟಲ್ಗಳಲ್ಲಿ ಅಳವಡಿಸಬೇಕು ಎಂದು ಅವರು ಸೂಚಿಸಿದರು.
ಕರೋನಾ ವೈರಸ್ ಪ್ರಕರಣಗಳನ್ನು ಸಾಂಕ್ರಾಮಿಕವಾಗಿ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಅಗತ್ಯ ಮುನ್ನಚ್ಚೆರಿಕಾ ಕ್ರಮಗಳನ್ನು ಮತ್ತು ಎಲ್ಲ ರೀತಿಯ ಸಿದ್ದತೆಗಳನ್ನು ಬಳ್ಳಾರಿ ಜಿಲ್ಲಾಡಳಿತದಿಂದ ಕೈಗೊಳ್ಳಲಾಗಿದ್ದು,ಇದುವರೆಗೆ ಯಾವುದೇ ರೀತಿಯ ಪ್ರಕರಣಗಳು ಕಂಡುಬಂದಿಲ್ಲ ಎಂದು ಡಿಸಿ ನಕುಲ್ ಅವರು ಸಭೆಗೆ ವಿವರಿಸಿದರು.
ಬಳ್ಳಾರಿ ಜಿಲ್ಲೆಯ ಜಿಲ್ಲಾಸ್ಪತ್ರೆ, ವಿಮ್ಸ್ ಮತ್ತು ಹೊಸಪೇಟೆಯ ಆಸ್ಪತ್ರೆಗಳಲ್ಲಿ ಕರೋನಾ ವೈರಸ್ ಪ್ರಕರಣಗಳ ಪತ್ತೆ ಮತ್ತು ಚಿಕಿತ್ಸೆಗೆ ಸಂಬಂಧಿಸಿದಂತೆ ಕರೋನಂಟೈನ್ ವಾರ್ಡ್ಗಳನ್ನು ತೆರೆಯಲಾಗಿದೆ. 10 ಹಾಸಿಗೆಗಳ ವ್ಯವಸ್ಥೆ, ಕರೋನಾ ವೈರಸ್ ಪತ್ತೆ,ಚಿಕಿತ್ಸೆ, ಮಾಸ್ಕ್ ಮತ್ತು ಔಷಧಿಗಳು ಸೇರಿದಂತೆ ಕರೋನಾ ವೈರಸ್ ಸಂಬಂಧಿಸಿದ ಕಿಟ್ಗಳ ವ್ಯವಸ್ಥೆ, ಸಿಬ್ಬಂದಿ ಕಾರ್ಯನಿರ್ವಹಣೆ ಸೇರಿದಂತೆ ಅಗತ್ಯ ಸಿದ್ದತೆಗಳನ್ನು ನಮ್ಮಲ್ಲಿ ಮಾಡಿಕೊಳ್ಳಲಾಗಿದೆ ಎಂದು ಅವರು ಸಭೆಗೆ ವಿವರಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಜನಾರ್ಧನ್ ಅವರು ಕರೋನಾ ವೈರಸ್ ಲಕ್ಷಣಗಳ ಬಗ್ಗೆ ಹಾಗೂ ಇದುವರೆಗೆ ಕೈಗೊಳ್ಳಲಾದ ಕ್ರಮಗಳ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಮೋತಿಲಾಲ್ ಲಮಾಣಿ,ಜಿಲ್ಲಾಸ್ಪತ್ರೆಯ ಸರ್ಜನ್ ಎನ್.ಬಸರೆಡ್ಡಿ, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ, ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳಾದ ಡಾ.ರಾಜಶೇಖರ, ಡಾ.ವಿಜಯಲಕ್ಷ್ಮೀ, ಡಾ.ಇಂದ್ರಾಣಿ ಸೇರಿದಂತೆ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಖಾಸಗಿ ಹೋಟಲ್ ಮಾಲೀಕರು ಇದ್ದರು