ಬೆಂಗಳೂರು, ಮಾ.06 (DaijiworldNews/PY) : ಒಂದಲ್ಲಾ ಒಂದು ಹೇಳಿಕೆಗಳನ್ನು ನೀಡಿ ಎಡವಟ್ಟು ಮಾಡಿಕೊಳ್ಳುವ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ವಿಧಾನಸಭೆಯಲ್ಲಿ ಮಹಾಭಾರತ ಬರೆದದ್ದು ಕೆಳಜಾತಿಯ ವಾಲ್ಮೀಕಿ ಎನ್ನುವ ಮೂಲಕ ಮುಜುಗರಕ್ಕೊಳಗಾಗಿದ್ಧಾರೆ.
ಸದನದಲ್ಲಿ ಸಂವಿಧಾನದ ಕುರಿತ ವಿಶೇಷ ಚರ್ಚೆ ನಡೆಯುತ್ತಿದ್ದ ಸಂದರ್ಭ ಮಾತನಾಡಿದ ಅವರು, "ವೇದಗಳು ಹಿಂದೂಗಳಿಗೆ ಬೇಕಾಗಿದ್ದವು. ಆಗ ವ್ಯಾಸರನ್ನು ಕರೆದು ವೇದ ರಚಿಸಲಾಯಿತು. ಇದಾದ ನಂತರ ಮಹಾ ಕಾವ್ಯ ರಚನೆಗಾಗಿ ಕೆಳಜಾತಿಯವರಾದ ವಾಲ್ಮೀಕಿಯನ್ನು ಕರೆತಂದರು ಎಂದು ತಪ್ಪಾಗಿ ನುಡಿದರು. ಸ್ವಲ್ಪ ಹೊತ್ತಲ್ಲೇ ತಪ್ಪಾಗಿ ಉಲ್ಲೇಖ ಮಾಡಿರುವುದಾಗಿ ಗೊತ್ತಾಗಿ ಸರಿಪಡಿಸಿಕೊಂಡ ಅವರು, ಮಹಾಭಾರತ ಬರೆದದ್ದು ವ್ಯಾಸರು" ಎಂದು ಹೇಳಿದರು.
"ಪ್ರಧಾನಿ ನರೇಂದ್ರ ಮೋದಿ ಅವರು ಡಾ. ಅಂಬೇಡ್ಕರ್ ಅವರು ಬರೆದ ಸಂವಿಧಾನದ ಅಡಿಯಲ್ಲೇ ಸಿಎಎ ಜಾರಿಗೆ ತಂದಿದ್ದಾರೆ. ಆದರೆ, ಅದರ ವಿರುದ್ದವಾಗಿ ವ್ಯವಸ್ಥಿತ ಪಿತೂರಿ ಮಾಡಿ ಸಂವಿಧಾನಕ್ಕೆ ಅಪಚಾರ ಮಾಡಲಾಗುತ್ತಿದೆ" ಎಂದರು.
"ಪರೋಕ್ಷವಾಗಿ ರಾಹುಲ್ ಗಾಂಧಿ ಕುಟುಂಬದ ವಿರುದ್ದ ಕಿಡಿಕಾರಿದ ಅವರು, ದೇಶದಲ್ಲಿ ಇಬ್ಬರು ಗಾಂಧಿಗಳಿಗೆ ಮಾತ್ರ ಪ್ರಾಮುಖ್ಯತೆ ನೀಡಲಾಗಿದೆ. ಒಂದು ಗಾಂಧೀಜಿ, ಇನ್ನೊಂದು ಈಗಿನ ಗಾಂಧಿ ಪರಿವಾರ. ಉಳಿದೆಲ್ಲಾ ಹೋರಾಟಗಾರರ ಸ್ಮರಣೆಯೇ ಇಲ್ಲ" ಎಂದು ಹೇಳಿದರು.
"ಅಂಬೇಡ್ಕರ್ ಅವರು ದೇಶದ ಪ್ರಧಾನಿಯಾಗಬೇಕಿತ್ತು. ಆದರೆ, ಅವರು ಬೌದ್ದ ಧರ್ಮ ಸ್ವೀಕರಿಸಿದ್ದರಿಂದ ಅವರಿಗೆ ಪ್ರಧಾನಿಯಾಗುವ ಅವಕಾಶ ಸಿಗಲಿಲ್ಲ. ಹಿಂದೂಗಳು ಇದರಿಂದ ನೆಮ್ಮದಿಯಿಂದ ಇರುವಂತಾಯಿತು" ಎಂದರು.
"ಸ್ವಾತಂತ್ರ್ಯ ಹೋರಾಟಗಾರ ವೀರ ಸಾರ್ವಕರ್ ಬಗ್ಗೆ ಕೆಲವರು ಏನೇನೋ ಮಾತನಾಡುತ್ತಾರೆ. ಸಾರ್ವಕರ್ ಅವರು ಎರಡೆರಡು ಬಾರಿ ಕಾಲಾಪಾನಿ ಶಿಕ್ಷೆ ಅನುಭವಿಸಿದವರು. ಆದರೆ, ಅವರು ಹಿಂದೂ ಧರ್ಮದ ಅಭಿಮಾನಿಗಳಾಗಿದ್ದರೆ. ಹಾಗಾಗಿ, ಅಂಬೇಡ್ಕರ್ ಅವರು ಸಾವರ್ಕರ್ ಅವರ ಬಗ್ಗೆ ಅಸಮಾಧಾನ ಹೊಂದಿದ್ದರು. ಆದರೆ, ಅಂಬೇಡ್ಕರ್ ಅವರು ಸಾವರ್ಕರ್ ಅವರ ಹಲವು ವಿಚಾರಗಳನ್ನು ಒಪ್ಪುತ್ತಿದ್ದರು" ಎಂದು ಹೇಳಿದರು.