ನವದೆಹಲಿ, ಮಾ.06 (DaijiworldNews/PY) : ಕೋವಿಡ್-19 ಸೋಂಕು ವಿಶ್ವದಾದ್ಯಂತ ವ್ಯಾಪಿಸುತ್ತಲೇ ಇದ್ದು, 3 ಸಾವಿರಕ್ಕೂ ಅಧಿಕ ಮಂದಿಯನ್ನು ಬಲಿತೆಗೆದುಕೊಂಡಿದೆ. ಈ ಹಿನ್ನೆಲೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು, ಜನರು ಒಂದೆಡೆ ಒಟ್ಟಾಗಿ ಗುಂಪು ಸೇರುವುದನ್ನು ತಪ್ಪಿಸಿ ಎಂದು ಶುಕ್ರವಾರ ತಿಳಿಸಿದೆ.
ಈ ವಿಚಾರವಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಟ್ವೀಟ್ ಮಾಡಿದ್ದು, ಕೋವಿಡ್-19 ಸೋಂಕು ಹರಡುವಿಕೆಯು ನಿಯಂತ್ರಣಕ್ಕೆ ಬರುವವರೆಗೂ ಸಾಮೂಹಿಕ ಕೂಟಗಳನ್ನು ತಪ್ಪಿಸಬಹುದು ಅಥವಾ ಮುಂದೂಡಬಹುದು ಎಂದು ರಾಜ್ಯ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ತಿಳಿಸಿದೆ.
ಒಂದು ವೇಳೆ ಜನರು ಒಂದೆಡೆ ಸಾಮೂಹಿಕವಾಗಿ ಸೇರುವಂತ ಕಾರ್ಯಕ್ರಮಗಳನ್ನು ಆಯೋಜಿಸಿದ್ದೇ ಆದಲ್ಲಿ ಆಯೋಜಕರಿಗೆ ರಾಜ್ಯ ಸರ್ಕಾರ ಅಗತ್ಯ ಮಾರ್ಗದರ್ಶನ ನೀಡಬೇಕು ಹಾಗೂ ಅಗತ್ಯವಾದ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದಿದೆ.
ಏಕಾಏಕಿ ಹರಡುತ್ತಿರುವ ಕೋವಿಡ್-19 ಸೋಂಕನ್ನು ತಡೆಗಟ್ಟಬೇಕಾದರೆ, ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ಹಲವು ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿರುತ್ತದೆ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕರು ಸರ್ಕಾರಗಳಿಗೆ ಎಚ್ಚರಿಕೆ ನೀಡಿದ್ದಾರೆ.
ವಿಶ್ವದಾದ್ಯಂತ ಕೋವಿಡ್-19 ಸೋಂಕಿಗೆ ಒಳಗಾಗಿರುವವರ ಸಂಖ್ಯೆಯು ಸುಮಾರು 10 ಸಾವಿರಕ್ಕೆ ಏರಿದ್ದು, ಹೀಗಾಗಿ ಅಗತ್ಯ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.