ನವದೆಹಲಿ, ಮಾ 6 (Daijiworld News/MSP): ಗಲ್ಲು ಶಿಕ್ಷೆಯಿಂದ ತಪ್ಪಿಕೊಳ್ಳಲು ನಿರ್ಭಯಾ ಹತ್ಯಾಚಾರಿಗಳು ಒಂದಿಲ್ಲೊಂದು ಮಾರ್ಗಗಳನ್ನು ಹುಡುಕುತ್ತಿದ್ದು, ಇದೀಗ ಪ್ರಕರಣದ ಆರೋಪಿ ಮುಕೇಶ್ ಮತ್ತೊಮ್ಮೆ ಸುಪ್ರೀಂಕೊರ್ಟ್ ಮೆಟ್ಟಿಲೇರಿದ್ದಾನೆ. ಪಟಿಯಾಲ ಹೌಸ್ ಕೋರ್ಟ್ ಹೊಸ ಮರಣದಂಡನೆ ಆದೇಶ ನೀಡಿ ಮಾ. 20 ರಂದು ಗಲ್ಲಿಗೇರಿಸುವಂತೆ ಆದೇಶ ನೀಡಿದ ಬಳಿಕ ಇದೀಗ ಅಪರಾಧಿ ಮುಕೇಶ್ ಗಲ್ಲುಶಿಕ್ಷೆಯನ್ನು ಜೀವಾವಧಿಗೆ ಬದಲಿಸುವಂತೆ ಕ್ಯುರೇಟಿವ್ ಅರ್ಜಿ ಸಲ್ಲಿಸಿದ್ದಾನೆ. ಜತೆಗೆ ಕ್ಷಮಾದಾನ ಕೋರಿ ಮತ್ತೊಮ್ಮೆ ರಾಷ್ಟ್ರಪತಿಯವರಿಗೆ ಮನವಿ ಮಾಡಿದ್ದಾನೆ.
ಅರ್ಜಿ ಸಲ್ಲಿಕೆಯಲ್ಲಿ ಅಪರಾಧಿ ಮುಕೇಶ್ ಈ ಹಿಂದೆ ತನ್ನ ಪರವಾದ ಮಂಡಿಸಿದ್ದ ಆ್ಯಮಿಕಸ್ ಕ್ಯೂರಿ ವೃಂದಾ ಗ್ರೋವರ್ ಅವರು ಒತ್ತಾಯಪೂರ್ವಕವಾಗಿ ಕ್ಯುರೇಟಿವ್ ಮತ್ತು ಕ್ಷಮಾದಾನ ಅರ್ಜಿಗಾಗಿ ನನ್ನ ಸಹಿ ಪಡೆದಿದ್ದರು. ಅಲ್ಲದೆ ಈ ಬಗ್ಗೆ ಕೋರ್ಟ್ ಗೆ ತಪ್ಪು ಮಾಹಿತಿ ನೀಡಿದ್ದರು ಎಂದು ಆರೋಪಿಸಿದ್ದಾನೆ. ಅಲ್ಲದೆ ತನ್ನ ಹಕ್ಕನ್ನು ತನಗೆ ನೀಡಿ ತನಗೆ ನೀಡಿರುವ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಬದಲಿಸಲು ಅವಕಾಶ ನೀಡಬೇಕು ಎಂದು ಕೇಳಿದ್ದಾನೆ.
ಪುನರ್ ಪರಿಶೀಲನಾ ಅರ್ಜಿ ವಜಾಗೊಂಡ ಬಳಿಕ ದಿನದಿಂದ ಮೂರು ವರ್ಷಗಳು ಅಂದರೆ ಜುಲೈ 2021ರವರೆಗೂ ತನಗೆ ಕ್ಯುರೇಟಿವ್ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಈ ಕುರಿತ ತನ್ನ ಹಕ್ಕನ್ನು ನೀಡಬೇಕು ಎಂದು ಮುಕೇಶ್ ಅರ್ಜಿಯಲ್ಲಿ ಮನವಿ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಅಪರಾಧಿಗಳ ತಂತ್ರವನ್ನು ಗಮನಿಸುತ್ತಿರುವ ಸುಪ್ರಿಂ ಕೋರ್ಟ್ ನ ನಡೆ ಮುಂದಿನ ದಿನಗಳಲ್ಲಿ ಏನಿರಬಹುದು ಎಂದು ದೇಶವೇ ಕಾಯತೊಡಗಿದೆ.