ನವದೆಹಲಿ, ಮಾ. 07 (Daijiworld News/MB) : ದೆಹಲಿ ಹಿಂಸಾಚಾರದ ಬಗ್ಗೆ ಪ್ರಸಾರ ಮಾಡಿದ ವರದಿಗಳಿಗಾಗಿ ಮಲಯಾಳಂನ ಏಶ್ಯಾನೆಟ್ ನ್ಯೂಸ್ ಹಾಗೂ ಮೀಡಿಯಾ ಒನ್ ಸುದ್ದಿ ಸುದ್ದಿವಾಹಿನಿಗಳ ಪ್ರಸಾರಕ್ಕೆ ಕೇಂದ್ರ ಮಾಹಿತಿ ಹಾಗೂ ಪ್ರಸಾರ ಸಚಿವಾಲಯವು 48 ಗಂಟೆಗಳ ನಿಷೇಧ ವಿಧಿಸಿದೆ.
ಈ ಎರಡು ಸುದ್ದಿವಾಹಿನಿಗಳ ಪ್ರಸಾರವನ್ನು ಶುಕ್ರವಾರ ಸಂಜೆ 7:30ರಿಂದ ಸ್ಥಗಿತಗೊಳಿಸಲಾಗಿದ್ದು ಮಾರ್ಚ್ 8, ಭಾನುವಾರ ಸಂಜೆ 7:30ರ ನಂತರವಷ್ಟೇ ಅವು ತಮ್ಮ ಪ್ರಸಾರವನ್ನು ಪುನಾರಂಭಿಸಲಿವೆ.
1994 ರ ಕೇಬಲ್ ಜಾಲ ನಿಯಮಾವಳಿಗಳಡಿ ಈ ಎರಡು ಚಾನಲ್ಗಳ ಮೇಲೆ ತಾತ್ಕಾಲಿಕ ನಿಷೇಧವನ್ನು ಹೇರಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಏಶ್ಯಾನೆಟ್ ನ್ಯೂಸ್ ಹಾಗೂ ಮೀಡಿಯಾ ಒನ್ ಈ ಎರಡು ಸುದ್ದಿ ವಾಹಿನಿಗಳು ದೆಹಲಿ ಹಿಂಸಾಚಾರದ ಬಗ್ಗೆ ಪ್ರಸಾರ ಮಾಡಿದ ವರದಿಗಳು ಪ್ರಚೋದನಕಾರಿ, ಪಕ್ಷಪಾತದಿಂದ ಕೂಡಿದ್ದವು. ಹಾಗೆಯೇ ಆರ್ಎಸ್ಎಸ್, ದೆಹಲಿ ಪೊಲೀಸರನ್ನು ಟೀಕೆ ಮಾಡಿದೆ. ಒಂದು ನಿರ್ದಿಷ್ಟ ಸಮುದಾಯದ ಪರವಹಿಸಿದ್ದವು. ಅಷ್ಟು ಮಾತ್ರವಲ್ಲದೆ ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಗರನ್ನು ಕೆಟ್ಟದಾಗಿ ಬಿಂಬಿಸಿದೆ ಎಂದು ಕೇಂದ್ರ ಮಾಹಿತಿ ಹಾಗೂ ಪ್ರಸಾರ ಸಚಿವಾಲಯ ಆರೋಪ ಮಾಡಿದೆ.
ದೆಹಲಿ ಜಫ್ರಾಬಾದ್ನಲ್ಲಿ ನಡೆದ ಹಿಂಸಾಚಾರ ಹಾಗೂ ಗಲಭೆಯ ಸಂದರ್ಭದಲ್ಲಿ ಪೊಲೀಸರು ಮೂಕ ಪ್ರೇಕ್ಷಕರಂತೆ ವರ್ತನೆ ಮಾಡಿದ್ದಾರೆ ಎಂದು ಏಶ್ಯಾನೆಟ್ ನ್ಯೂಸ್ ವರದಿಗಾರ ಪ್ರಕಟಿಸಿದ್ದು ಆ ಹಿನ್ನಲೆಯಲ್ಲಿ ಈ ತಾತ್ಕಾಲಿಕ ನಿಷೇಧ ಹೇರಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಹಾಗೆಯೇ ಮೀಡಿಯಾ ಒನ್ ಸುದ್ದಿ ವಾಹಿನಿಯ ಫೋನ್ ಇನ್ ಸಂಭಾಷಣೆಯಲ್ಲಿ ದೆಹಲಿ ವರದಿಗಾರ ಹಸ್ಸನುಲ್ ಬುನ್ನಾ ಅವರು ಹಿಂಸಾಚಾರದಲ್ಲಿ ಸಿಎಎ ವಿರೋಧಿ ಪ್ರತಿಭಟನಕಾರರು ಗಾಯಗೊಂಡಿದ್ದಾರೆ ಹಾಗೂ ಘಟನಾ ಸ್ಥಳಕ್ಕೆ ಆಗಮಿಸಲು, ದುಷ್ಕರ್ಮಿಗಳನ್ನು ಬಂಧನ ಮಾಡಲು ಪೊಲೀಸರು ನಿರಾಕರಿಸಿದ್ದಾರೆ ಎಂದು ವರದಿ ಮಾಡಿದ್ದು ಈ ಹಿನ್ನಲೆಯಲ್ಲಿ ಈ ತಾತ್ಕಾಲಿಕ ನಿಷೇಧ ಹೇರಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಹಾಗೆಯೇ ಈ ಆದೇಶದಲ್ಲಿ, ಗಲಭೆಕೋರರು ಪ್ರಯಾಣಿಕರಿಗೆ ತಡೆಯೊಡ್ಡಿ, ಧರ್ಮದ ಗುರುತಿನಲ್ಲಿ ಅವರ ಮೇಲೆ ದಾಳಿ ಮಾಡಿದ್ದಾರೆ. ಸತತ ಮೂರು ದಿನಗಳ ಕಾಲ ಹಿಂಸಾಚಾರ ನಡೆದಿದೆ. ಗಲಭೆಕೋರರು ಅಂಗಡಿಗಳನ್ನು, ಮನೆಗಳು ಹಾಗೂ ವಾಹನಗಳನ್ನು ಸುಟ್ಟಿದ್ದಾರೆ. ಆದರೆ ಪೊಲೀಸರು ಯಾವುದೇ ಕ್ರಮಕೈಗೊಂಡಿಲ್ಲ. ಈ ಗಲಭೆಯನ್ನು ನಿಯಂತ್ರಣಕ್ಕೆ ತರಲು ಕೇಂದ್ರ ಸರ್ಕಾರವು ಯಾವುದೇ ಕ್ರಮಕೈಗೊಂಡಿಲ್ಲ ಎಂಬ ಏಶ್ಯಾನೆಟ್ ನ್ಯೂಸ್ ವರದಿಯ ಬಗ್ಗೆ ಆಕ್ಷೇಪ ಮಾಡಲಾಗಿದೆ.
ದೆಹಲಿ ಹಿಂಸಾಚಾರದ ಕುರಿತು ವರದಿಯಲ್ಲಿ ಮೀಡಿಯಾ ಒನ್ ಸುದ್ದಿವಾಹಿನಿಯು ಕಲ್ಲೆಸೆತ, ಗಲಭೆ ಹಾಗೂ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುತ್ತಿರುವ ಸುದ್ದಿಯನ್ನು ಪ್ರಸಾರ ಮಾಡಿದೆ. ಇಂತಹ ಉದ್ರಿಕ್ತ ಪರಿಸ್ಥಿತಿಯಲ್ಲಿ ಈ ವರದಿಗಳು ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತದೆ ಹಾಗೂ ಕಾನೂನು, ಶಿಸ್ತು ನಿರ್ವಹಣೆಗೆ ಅಪಾಯಕಾರಿ ಎಂದು ಆದೇಶ ಹೇಳಿದೆ.