ಬೆಂಗಳೂರು,ಮಾ 07 (DaijiworldNews/MSP): ಸರ್ಕಾರ ತೆಗೆದುಕೊಂಡಿರುವ ಮುಂಜಾಗ್ರತಾ ಕ್ರಮದಿಂದ ಕರ್ನಾಟಕ ರಾಜ್ಯದಲ್ಲಿ ಇಲ್ಲಿಯ ತನಕ ಒಂದೇ ಒಂದು ಕೊರೊನಾ ವೈರಸ್ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಮಾಹಿತಿ ನೀಡಿದ್ದಾರೆ.
ವಿಧಾನಸೌಧದಲ್ಲಿ ಹೆಲ್ತ್ ಬುಲೆಟಿನ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಇದುವರೆಗೂ ರಾಜ್ಯದಲ್ಲಿ ಎಲ್ಲಿಯೂ ಕೊರೊನಾ ಪಾಸಿಟಿವ್ ಪತ್ತೆಯಾಗಿಲ್ಲ. ಶಂಕಿತ ಪ್ರಕರಣಕ್ಕೆ ಕುರಿತಂತೆ ಎಲ್ಲಾ ರಿಪೋರ್ಟ್ ಗಳಲ್ಲೂ ನೆಗೆಟಿವ್ ಅಂತ ವರದಿ ಬಂದಿದೆ. ಇದಲ್ಲದೆ ರೋಗದ ಲಕ್ಷಣಗಳ ಶಂಕೆ ಹಿನ್ನೆಲೆಯಲ್ಲಿ ಶನಿವಾರವೂ ಮೂವರನ್ನು ಒಳರೋಗಿಗಳಾಗಿ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ರಾಜ್ಯ ಸರ್ಕಾರ ಟಾಸ್ಕ್ ಪೋರ್ಸ್ ರಚಿಸಿ ಕೊರೊನಾ ಪ್ರಕರಣಗಳ ಕುರಿತು ತೀವ್ರ ನಿಗಾ ಇರಿಸಲಾಗಿದೆ. ಸರ್ಕಾರ ಈ ಬಗ್ಗೆ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯದಲ್ಲಿ ಈಗಾಗಲೇ 72,542 ಜನರನ್ನು ತಪಾಸಣೆ ಮಾಡಲಾಗಿದೆ. ಕಳೆದ ಎರಡು ದಿನಗಳಲ್ಲಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 49,594 ಪ್ರಯಾಣಿಕರ ತಪಾಸಣೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಕಾರ್ಪೋರೇಟ್ ಹಾಗೂ ಐಟಿ ಕಂಪನಿಯಲ್ಲಿ ಬಯೋಮೆಟ್ರಿಕ್ ಲಾಗ್ ಇನ್ ನಿಲ್ಲಿಸಲಾಗಿದೆ. ಮಾತ್ರವಲ್ಲದೆ ಕೊರೊನಾ ಪತ್ತೆಗಾಗಿ ಹೊಸ ಯಂತ್ರಗಳನ್ನು ಜಿಲ್ಲಾ ಕೇಂದ್ರಗಳಿಗೆ ಕಳುಹಿಸಿಕೊಡಲಾಗುವುದು ಎಂದರು.