ನವದೆಹಲಿ, ಮಾ. 07 (Daijiworld News/MB) : ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿ ನಡೆದ ಹಿಂಸಾಚಾರದ ಕುರಿತಾಗಿ ಪ್ರಚೋಧನಕಾರಿ ವರದಿ ಪ್ರಸಾರ ಮಾಡಿದ ಆರೋಪದಲ್ಲಿ ಮಲಯಾಳಂನ ಎರಡು ಸುದ್ದಿ ವಾಹಿನಗಳ ಮೇಲೆ ಕೇಂದ್ರ ಸರ್ಕಾರ 48 ಗಂಟೆಗಳ ಕಾಲ ನಿಷೇಧ ಹೇರಿದ್ದು ಇದೀಗ ಆ ನಿಷೇಧವನ್ನು ಹಿಂಪಡೆದಿದೆ.
ಶುಕ್ರವಾರ ರಾತ್ರಿ ಎರಡು ಮಲಯಾಳಂ ಸುದ್ದಿವಾಹಿನಿಗಳನ್ನು 48 ಗಂಟೆಗಳ ಕಾಲ ನಿಷೇಧಿಸಿ ಆದೇಶ ಹೊರಡಿಸಿದ್ದ ಕೇಂದ್ರ ಸರ್ಕಾರವು ಶನಿವಾರ ಮಧ್ಯರಾತ್ರಿ 1.30(ಮಾರ್ಚ್ 7)ಕ್ಕೆ ಏಷ್ಯಾನೆಟ್ ಮೇಲೆ ಹೇರಿರುವ ನಿಷೇಧವನ್ನು ತೆರವುಗೊಳಿಸಲಾಗಿತ್ತು. ಮೀಡಿಯಾ ಒನ್ ಮೇಲೆ ವಿಧಿಸಿರುವ ನಿರ್ಭಂದವನ್ನು ಬೆಳಿಗ್ಗೆ 9.30ಕ್ಕೆ ತೆರವುಗೊಳಿಸಿರುವುದಾಗಿ ಮಾಹಿತಿ ಮತ್ತು ಪ್ರಸರಣ ಸಚಿವಾಲಯವು ತಿಳಿಸಿರುವುದಾಗಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಏಶ್ಯಾನೆಟ್ ನ್ಯೂಸ್ ಹಾಗೂ ಮೀಡಿಯಾ ಒನ್ ಈ ಎರಡು ಸುದ್ದಿ ವಾಹಿನಿಗಳು ದೆಹಲಿ ಹಿಂಸಾಚಾರದ ಬಗ್ಗೆ ಪ್ರಸಾರ ಮಾಡಿದ ವರದಿಗಳು ಪ್ರಚೋದನಕಾರಿ, ಪಕ್ಷಪಾತದಿಂದ ಕೂಡಿದ್ದವು. ಹಾಗೆಯೇ ಆರ್ಎಸ್ಎಸ್, ದೆಹಲಿ ಪೊಲೀಸರನ್ನು ಟೀಕೆ ಮಾಡಿದೆ. ಒಂದು ನಿರ್ದಿಷ್ಟ ಸಮುದಾಯದ ಪರವಹಿಸಿದ್ದವು. ಅಷ್ಟು ಮಾತ್ರವಲ್ಲದೆ ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಗರನ್ನು ಕೆಟ್ಟದಾಗಿ ಬಿಂಬಿಸಿದೆ ಎಂದು ಕೇಂದ್ರ ಮಾಹಿತಿ ಹಾಗೂ ಪ್ರಸಾರ ಸಚಿವಾಲಯ ತನ್ನ ಈ ನಿಷೇದ ಆದೇಶದಲ್ಲಿ ಆರೋಪ ಮಾಡಿತ್ತು.
ಕೇಂದ್ರ ಸರ್ಕಾರ ನಿಷೇಧ ಹೇರಿದ ಕ್ರಮವನ್ನು ಕಾಂಗ್ರೆಸ್, ಸಿಪಿಐ, ಸಿಪಿಐಎಂ ಪಕ್ಷಗಳು ಟೀಕೆ ಮಾಡಿದ್ದು ಇದು ಅಘೋಷಿತ ತುರ್ತು ಪರಿಸ್ಥಿತಿ. ಮಾಧ್ಯಮ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ಆರೋಪಿಸಿದೆ.