ಬೆಂಗಳೂರು, ಮಾ.07 (DaijiworldNews/PY) : ಜೆಡಿಎಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಮೇಶ್ ಬಾಬು ಅವರು ಪಕ್ಷ ತೊರೆದಿದ್ದು, ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಶನಿವಾರ ರಾಜೀನಾಮೆ ಸಲ್ಲಿಸಿದ್ದಾರೆ.
ಸಮರ್ಥವಾಗಿ ಪಕ್ಷದ ಜವಾಬ್ದಾರಿಗಳನ್ನು ನಿರ್ವಹಿಸಿದರೂ ವಿಧಾನಪರಿಷತ್ತಿನ ಸದಸ್ಯನಾಗಿ ಒಂದು ಪೂರ್ಣ ಅವಧಿಗೆ ಕಾರ್ಯನಿರ್ವಹಿಸುವ ಅವಕಾಶ ದೊರೆಯಲಿಲ್ಲ ಹಾಗೂ ಇತರ ಕಾರಣಗಳಿಂದ ತಾನು ರಾಜೀನಾಮೆ ಸಲ್ಲಿಸುತ್ತಿರುವುದಾಗಿ ರಮೇಶ್ ಬಾಬು ಅವರು ಬಿಡುಗಡೆ ಮಾಡಿರುವ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
ರಮೇಶ್ ಬಾಬು ಅವರು ಆಗ್ನೇಯ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ ಪ್ರವೇಶ ಬಯಸಿದ್ದು, ಅವರಿಗೆ ಜೆಡಿಎಸ್ ಟಿಕೆಟ್ ನೀಡಿರಲಿಲ್ಲ. ಈ ಕಾರಣದಿಂದ ಬೇಸರಗೊಂಡಿದ್ದ ಅವರು ಪಕ್ಷ ವರಿಷ್ಠ ಎಚ್ ಡಿ ದೇವೆಗೌಡರಿಗೆ ತಮ್ಮ ರಾಜೀನಾಮೆ ಪತ್ರ ರವಾನಿಸಿದ್ಧಾರೆ.
ಎಂಎಲ್ ಸಿ ಪುಟ್ಟಣ್ಣ ಅವರು ಇತ್ತೀಚೆಗಷ್ಟೇ ಪಕ್ಷ ತೊರೆದು ಬಿಜೆಪಿ ಸೇರಿದ್ದರು. ಈಗ ರಮೇಶ್ ಬಾಬು ಅವರು ರಾಜೀನಾಮೆ ನೀಡಿದ್ದಾರೆ. ಮಧು ಬಂಗಾರಪ್ಪ ಅವರು ಕೆಲ ದಿನಗಳ ಹಿಂದೆಯಷ್ಟೇ ಅಸಮಾಧಾನ ವ್ಯಕ್ತಪಡಿಸಿದ್ದರು.
ದಾವಣಗೆರೆಯಲ್ಲಿ ಶನಿವಾರ ರಮೇಶ್ ಬಾಬು ಅವರು ಸುದ್ದಿಗೋಷ್ಠಿ ಕರೆದಿದ್ದು, ತಮ್ಮ ಮುಂದಿನ ನಡೆಯ ವಿಚಾರದ ಬಗ್ಗೆ ಬಹಿರಂಗಪಡಿಸುವ ಸಾಧ್ಯತೆಯಿದೆ.