ನವದೆಹಲಿ, ಮಾ.07 (DaijiworldNews/PY) : "ಕೊರೋನಾ ವೈರಸ್ ವದಂತಿಯಿಂದ ದೂರ ಇರುವಂತೆ ನನ್ನ ದೇಶದ ಜನರಲ್ಲಿ ಮನವಿ ಮಾಡುತ್ತೇನೆ. ಹಾಗಾಗಿ ನಾವು ಸೂಕ್ತ ವೈದ್ಯರ ಸಲಹೆಯನ್ನು ಪಾಲಿಸಬೇಕಾಗಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ವಿಡಿಯೋ ಕಾನ್ಫರೆನ್ಸ್ನಲ್ಲಿ ಮಾತನಾಡಿದ ಅವರು, "ಜನೌಷಧಿ ಕೇಂದ್ರಗಳ ಮಾಲೀಕರು ಹಾಗೂ ಪ್ರಧಾನ್ ಮಂತ್ರಿ ಭಾರತೀಯ ಜನೌಶಧಿ ಪರಿಯೋಜನ (ಪಿಎಂಬಿಜೆಪಿ) ಫಲಾನುಭವಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಹನ ನಡೆಸಿದರು. ಈ ಸಂದರ್ಭ ಕೊರೋನಾ ವೈರಸ್ ವಿಚಾರವಾಗಿ ಆತಂಕಪಡಬೇಡಿ, ಸೂಕ್ತ ವೈದ್ಯರ ಸಲಹೆ ಪಡೆದುಕೊಳ್ಳಿ" ಎಂದು ತಿಳಿಸಿದರು.
"ನಾವು ನಮಸ್ಕಾರ ಎಂದು ಶುಭಾಶಯ ಕೋರುವುದನ್ನು ಕೆಲವು ಕಾರಣಗಳಿಂದ ಮರೆತಿದ್ದೇವೆ. ಆದರೆ, ಇಂದು ಇಡೀ ಜಗತ್ತೇ ನಮಸ್ಕಾರ ಮಾಡುತ್ತಿದೆ. ನಾವು ಕೈಕುಲುಕುವ ಬದಲು ನಮಸ್ಕಾರ ಮಾಡುವ ಅಭ್ಯಾಸವನ್ನು ಮತ್ತೊಮ್ಮೆ ಅಳವಡಿಸಿಕೊಳ್ಳಬೇಕು" ಎಂದರು.
"ಜನೌಷಧಿ ಕೇಂದ್ರದಿಂದ ಪ್ರತೀ ತಿಂಗಳು ಒಂದು ಕೋಟಿ ಕುಟುಂಬಗಳು ಅಗ್ಗದ ಔಷಧಿಗಳ ಲಾಭವನ್ನು ಪಡೆದೊಕೊಳ್ಳುತ್ತಿವೆ. ದೇಶಾದ್ಯಂತ 6000ಕ್ಕೂ ಅಧಿಕ ಜನೌಷಧಿ ಕೇಂದ್ರಗಳು ಜನರಿಗೆ 2000-2500 ಕೋಟಿ ರೂಗಳನ್ನು ಉಳಿಸಲು ಸಹಾಯ ಮಾಡಿದೆ" ಎಂದು ತಿಳಿಸಿದರು.