ಹಿರೇಕೆರೂರು, ಮಾ.07 (DaijiworldNews/PY) : "ಬಿಪಿಎಲ್ ಕಾರ್ಡುದಾರರಿಗೆ ಅನ್ನಭಾಗ್ಯ ಯೋಜನೆಯಲ್ಲಿ ನೀಡುತ್ತಿದ್ದ 7 ಕೆಜಿ ಅಕ್ಕಿಯನ್ನು ಕಡಿತಗೊಳಿಸಿ, ಇನ್ನು ಮುಂದೆ 5 ಕೆಜಿ ಅಕ್ಕಿ ನೀಡಲಾಗುವುದು. ಇದರಲ್ಲಿ ಉಳಿದ 2ಕೆಜಿಗೆ ಜೋಳ ಅಥವಾ ರಾಗಿಯನ್ನು ನೀಡಲಾಗುವುದು" ಎಂದು ಸಚಿವ ಬಿ.ಸಿ ಪಾಟೀಲ್ ಹೇಳಿದ್ಧಾರೆ.
ನಗರದಲ್ಲಿ ಅನ್ನಭಾಗ್ಯ ಕಡಿತ ಮಾಡಿರುವ ಸರ್ಕಾರದ ತೀರ್ಮಾನದ ಬಗ್ಗೆ ಮಾತನಾಡಿದ ಅವರು, "ಇನ್ನು ಮುಂದೆ ಅನ್ನಭಾಗ್ಯ ಯೋಜನೆಯಲ್ಲಿ 5 ಕೆಜಿ ಅಕ್ಕಿ ನೀಡಲಾಗುವುದು. ಉಳಿದ 2 ಕೆಜಿಗೆ ಜೋಳ ಅಥವಾ ರಾಗಿ ನೀಡಲಾಗುವುದು. ಉತ್ತರ ಕರ್ನಾಟಕದ ಜನರು ರೊಟ್ಟಿ ತಿನ್ನುತ್ತಾರೆ, ಹಳೆ ಮೈಸೂರಿನಲ್ಲಿ ಹೆಚ್ಚಾಗಿ ಮುದ್ದೆ ಹೆಚ್ಚಾಗಿ ತಿನ್ನುತ್ತಾರೆ. ಆದ ಕಾರಣ 2 ಕೆಜಿ ಜೋಳ, ರಾಗಿ ನೀಡಲು ಸರ್ಕಾರ ತೀರ್ಮಾನಿಸಿದೆ. ಅಲ್ಲದೇ ಜೋಳ, ರಾಗಿಗೂ ಬೇಡಿಕೆ ಬರುತ್ತದೆ" ಎಂದು ತಿಳಿಸಿದರು.
ಈ ಬಾರೀ ಬಜೆಟ್ನಲ್ಲಿ ಅನ್ನಭಾಗ್ಯ ಯೋಜನೆಗೆ ರೂ. 1,234 ಕೋಟಿ ರೂ ಕಡಿತ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ಪರ್ಯಾಯವಾಗಿ ಈ ಧಾನ್ಯಗಳನ್ನು ನೀಡಲು ಸರ್ಕಾರ ತೀರ್ಮಾನಿಸಲಾಗಿದೆ.
ಈ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಈ ಕುರಿತು ಮುಖ್ಯಮಂತ್ರಿಗಳನ್ನೇ ಕೇಳುವುದು ಸೂಕ್ತ. ಈಗ ಅಧಿವೇಶನ ನಡೆಯುತ್ತಿದ್ದು, ಅಧಿವೇಶನ ಮುಗಿದ ನಂತರ ಈ ವಿಚಾರದ ಬಗ್ಗೆ ತೀರ್ಮಾನ ಕೈಗೊಳ್ಳಬಹುದು" ಎಂದು ಹೇಳಿದರು.
"ನಾವೆಲ್ಲಾ ಬಂದ ಬಳಿಕ ಬಿಜೆಪಿ ಸರ್ಕಾರ ಆಗ ಬೀಳುತ್ತದೆ, ಈಗ ಬೀಳುತ್ತದೆ ಎಂಬ ಗಾಳಿ ಸುದ್ದಿಗಳು ಸುಳ್ಳಾಗಿದೆ. ಸರ್ಕಾರ ಸುಭದ್ರವಾಗಿದ್ದು, ಬಿಎಸ್ವೈ ಅವರು ಮೂರುವರೆ ವರ್ಷಗಳ ಕಾಲ ಆಡಳಿತ ನಡೆಸಲಿದ್ದಾರೆ. ಆರ್. ಶಂಕರ್ ಸೇರಿದಂತೆ ಅನರ್ಹ ಶಾಸಕರಿಗೆ ಸಚಿವ ಸ್ಥಾನ ನೀಡುವಲ್ಲಿ ಕೆಲವು ತಾಂತ್ರಿಕ ತೊಂದರೆಗಳಾಗಿವೆ. ಈ ತೊಂದರೆಗಳು ಬಗೆಹರಿಯಬೇಕು. ಎಲ್ಲರಿಗೂ ಬಿಎಸ್ವೈ ಅವರು ನ್ಯಾಯ ಒದಗಿಸುತ್ತಾರೆ ಎಂಬ ವಿಶ್ವಾಸವಿದೆ" ಎಂದು ತಿಳಿಸಿದರು.