ಹುಬ್ಬಳ್ಳಿ, ಮಾ.07 (DaijiworldNews/PY) : "ಈ ಹಿಂದೆ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರವನ್ನು ಪ್ರಧಾನಿ ಮೋದಿ ಅವರು ಶೇ 10 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಟೀಕಿಸಿದ್ದರು. ಆದರೆ, ಪ್ರಸ್ತುತ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಶೇ.20 ಪರ್ಸೆಂಟ್ ಕಮಿಷನ್ ಸರ್ಕಾರವಾಗಿದೆ. ಭ್ರಷ್ಟಾಚಾರ ಮಿತಿಮೀರಿದ್ದು, ಹಣ ನೀಡದೇ ಜನಸಾಮಾನ್ಯರ ಯಾವುದೇ ಕಾರ್ಯ ನಡೆಯುತ್ತಿಲ್ಲ" ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.
ಶನಿವಾರ ನಗರದಲ್ಲಿ ಆರಂಭವಾದ ಎರಡು ದಿನಗಳ ಬೆಳಗಾವಿ ವಿಭಾಗ ಮಟ್ಟದ ಜೆಡಿಎಸ್ ಕಾರ್ಯಕರ್ತರ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, "ಹಲವು ವ್ಯಾಖ್ಯಾನಗಳು, ಟೀಕೆ, ಟಿಪ್ಪಣಿಗಳು ಜೆಡಿಎಸ್ ಮುಖಂಡರ ನಡೆಯ ಬಗ್ಗೆ ವ್ಯಕ್ತವಾಗುತ್ತಿವೆ. ಪಕ್ಷ ಅಧಿಕಾರದಲ್ಲಿದ್ದ ಸಂದರ್ಭ ನಿಷ್ಠಾವಂತ ಕಾರ್ಯಕರ್ತರು ಕಡೆಗಣನೆಗೆ ಒಳಗಾಗಿದ್ದಾರೆ. ಪಕ್ಷದ ವರಿಷ್ಠರು ಇದಕ್ಕೆ ಸ್ಪಷ್ಟನೆ ನೀಡಬೇಕು. ಹಿಂದೆ ಮಾಡಿದ ತಪ್ಪುಗಳನ್ನು ಸರಿಪಡಿಸಿಕೊಂಡು ಸಂಘಟನೆಗೆ ಆದ್ಯತೆ ನೀಡಬೇಕು" ಎಂದರು.
ಬಳಿಕ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಮಾತನಾಡಿ, "ಪ್ರಾದೇಶಿಕ ಪಕ್ಷವಾಗಿ ಜೆಡಿಎಸ್ ಅನ್ನು ಬಲಪಡಿಸುವ ಉದ್ದೇಶದಿಂದ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ಪಕ್ಷದ ಕಾರ್ಯಕರ್ತರಿಗೆ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ನಾನು ರಾಜಕೀಯಕ್ಕೆ ಪ್ರವೇಶಿಸಿ 59 ವರ್ಷಗಳಾದವು. ರಾಜಕೀಯದಲ್ಲಿ ಅನೇಕ ಏಳುಬೀಳುಗಳನ್ನು ಕಂಡಿದ್ದೇನೆ. ನನ್ನನ್ನು ಕೆಲವರು ಜಾತಿವಾದಿ ಎಂದು ಕರೆಯುತ್ತಾರೆ. ಜೆಡಿಎಸ್ ಹಳೇ ಮೈಸೂರಿಗೆ ಸೀಮಿತವಾದ ಪಕ್ಷ ಎಂದು ಇನ್ನು ಕೆಲವರು ಹೇಳುತ್ತಾರೆ. ಪಕ್ಷದ ಕಾರ್ಯಕರ್ತರು ಈ ವಿಚಾರದ ಬಗ್ಗೆ ಮುಕ್ತವಾಗಿ ಅಭಿಪ್ರಾಯ ತಿಳಿಸಬೇಕು. ಎಲ್ಲಿ ಎಡವಿದ್ದೇವೆ ಎನ್ನುವುದನ್ನು ಅರಿಯಬೇಕು" ಎಂದು ತಿಳಿಸಿದರು.