ಬೆಂಗಳೂರು, ಮಾ.07 (DaijiworldNews/PY) : "ಸಂವಿಧಾನ, ಪ್ರಜಾಪ್ರಭುತ್ವ ಗೌರವಿಸದ ಬಿಜೆಪಿಯವರು ನಿಜವಾದ ದೇಶದ್ರೋಹಿಗಳು. ಒಂದು ಕಡೆ ಭಾರತ್ ಮಾತಾ ಕೀ ಜೈ ಎಂದು ಹೇಳುತ್ತಲೇ ಇನ್ನೊಂದು ಕಡೆ ದೇಶದ್ರೋಹದ ಕಾರ್ಯವನ್ನು ಮಾಡುತ್ತಾರೆ" ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಈ ವಿಚಾರವಾಗಿ ಸರಣಿ ಟ್ವೀಟ್ ಮಾಡಿದ ಅವರು, "ಸಂವಿಧಾನದ ಪರವಾಗಿರುವವರು ಎಲ್ಲರೂ ಸೇರಿ ಬಿಜೆಪಿಯನ್ನು ಅಧಿಕಾರದಿಂದ ಕತ್ತೊಗೆದಾಗ ಮಾತ್ರ ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ಉಳಿಗಾಲ. ಇಲ್ಲದಿದ್ದರೆ ಜಾತಿ, ಧರ್ಮಗಳ ಆಧಾರದ ದೇಶ ಒಡೆದು, ಕೋಮುಗಲಭೆ, ಜನಾಂಗೀಯ ಘರ್ಷಣೆಗಳನ್ನು ಉಂಟುಮಾಡಿ, ಸರ್ವಜನಾಂಗದ ಶಾಂತಿಯ ತೋಟವಾದ ಭಾರತದ ಸಾಮರಸ್ಯವನ್ನು ಹಾಳುಮಾಡುತ್ತಾರೆ" ಎಂದಿದ್ದಾರೆ.
"ಸಂವಿಧಾನ, ಪ್ರಜಾಪ್ರಭುತ್ವ ಗೌರವಿಸದ ಬಿಜೆಪಿಯವರು ನಿಜವಾದ ದೇಶದ್ರೋಹಿಗಳು. ಒಂದು ಕಡೆ ಭಾರತ್ ಮಾತಾ ಕೀ ಜೈ ಎಂದು ಹೇಳುತ್ತಲೇ ಇನ್ನೊಂದು ಕಡೆ ದೇಶದ್ರೋಹದ ಕಾರ್ಯವನ್ನು ಮಾಡುತ್ತಾರೆ. ದೇಶದ ಬಡವರು, ಶೋಷಿತರು, ಮಹಿಳೆಯರು, ರೈತರ ಪರವಾಗಿರುವ ನಾವೇ ಭಾರತ ಮಾತೆಯ ನಿಜವಾದ ಮಕ್ಕಳು. ನಮ್ಮದು ಅವರಂತೆ ಢೋಂಗಿ ದೇಶಪ್ರೇಮವಲ್ಲ ಎಂದು ಹ್ಯಾಷ್ ಟ್ಯಾಗ್ ಹಾಕಿ ಸಂವಿಧಾನ ಉಳಿಸಿ" ಎಂದು ಬರೆದಿದ್ದಾರೆ.
"ಭಾರತೀಯ ಪೌರತ್ವ ಕಾಯ್ದೆ 1955ರಲ್ಲಿ ಜಾರಿಯಾಗಿದ್ದು, ಅಂದಿನಿಂದ ಇಂದಿನವರೆಗೆ ಈ ಕಾಯ್ದೆಗೆ 9 ತಿದ್ದುಪಡಿಗಳನ್ನು ಮಾಡಲಾಗಿದೆ. ಆ 9 ತಿದ್ದುಪಡಿಗಳಲ್ಲಿ ಯಾವ ತಿದ್ದುಪಡಿಯೂ ಧರ್ಮವನ್ನು ಆಧರಿಸಿಲ್ಲ. ಈಗ ಬಿಜೆಪಿಯವರು ಮಾಡಿರುವ ತಿದ್ದುಪಡಿ ಧರ್ಮಾಧಾರಿತವಾಗಿದ್ದು, ಅದು ಸಂವಿಧಾನದ ಮೂಲ ಆಶಯಕ್ಕೆ ಸಂಪೂರ್ಣ ವಿರುದ್ಧವಾಗಿದೆ" ಎಂದು ಹೇಳಿದರು.