ಮುಂಬೈ, ಮಾ.07 (DaijiworldNews/PY) : ಹಣಕಾಸು ಬಿಕ್ಕಟ್ಟಿಗೆ ಸಿಲುಕಿರುವ ಎಸ್ ಬ್ಯಾಂಕ್ನ ಪುನಶ್ಚೇತನಕ್ಕೆ ಎಸ್ಬಿಐ ಗರಿಷ್ಟ 10 ಸಾವಿರ ಕೋಟಿಯವರೆಗಿನ ಹೂಡಿಕೆ ಮಿತಿಯನ್ನು ನಿಗದಿಪಡಿಸಿದೆ.
ನಮ್ಮ ಕಾನೂನು ತಜ್ಞರ ತಂಡ ಪುನಶ್ಚೇತನ ಯೋಜನೆಯ ಕುರಿತಾಗಿ ಪರಿಶೀಲನೆ ನಡೆಸುತ್ತಿದೆ. ಪರಿಶೀಲನೆ ಪೂರ್ಣಗೊಂಡ ನಂತರ ಸೋಮವಾರ ಆರ್ಬಿಐಗೆ ನಮ್ಮ ಸಲಹೆ ಹಾಗೂ ಪ್ರತಿಕ್ರಿಯೆ ನೀಡಲಾಗುವುದು. ಆರ್ಬಿಐ ಬ್ಯಾಂಕ್ಗೆ ವಿಧಿಸಿರುವ 30 ದಿನಗಳ ನಿರ್ಬಂಧ ಮುಗಿಯುವುದರ ಒಳಗಾಗಿ ಯೋಜನೆಗೆ ಅನುಮತಿ ಪಡೆದು, ಜಾರಿಗೊಳಿಸಲು ಪ್ರಯತ್ನಿಸಲಾಗುವುದು ಎಂದು ಎಸ್ಬಿಐ ಅಧ್ಯಕ್ಷ ರಜನೀಶ್ ಕುಮಾರ್ ತಿಳಿಸಿದ್ದಾರೆ.
ಎಸ್ಬಿಐಗೆ ಪಾಲು ಬಂಡವಾಳ ಖರೀದಿಸುವ ಸಂಬಂಧ ಒಕ್ಕೂಟವನ್ನು ರಚಿಸುವಂತೆ ಹಲವು ಹೂಡಿಕೆದಾರರು ಕೇಳಿದ್ದಾರೆ. ಈ ವಿಚಾರದ ಬಗ್ಗೆ ಚರ್ಚೆ ನಡೆಯುತ್ತಿದೆ. ಎಸ್ಬಿಐ ಒಂದೇ ಶೇ 49ರಷ್ಟು ಷೇರನ್ನು ಖರೀದಿಸುವುದಾದರೆ ತಕ್ಷಣಕ್ಕೆ 2,450 ಕೋಟಿ ಹೂಡಿಕೆಯ ಅಗತ್ಯವಿದೆ. ಯೆಸ್ ಬ್ಯಾಂಕ್ನ ರಕ್ಷಣೆಗಾಗಿ ಮಾಡಲಿರುವ ಹೂಡಿಕೆಯಿಂದ ಎಸ್ಬಿಐನ ಬಂಡವಾಳ ಲಭ್ಯತೆ ಪ್ರಮಾಣದ ಮೇಲೆ ಅಧಿಕ ಪರಿಣಾಮವೇನೂ ಬೀರುವುದಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.