ಹಾವೇರಿ, ಮಾ.07 (DaijiworldNews/PY) : "ಮೈತ್ರಿ ಸರ್ಕಾರ ಮಾಡಿದ ಸಾಲ ಮನ್ನಾಕ್ಕೆ ಸಂಬಂಧಿಸಿದ ರೈತರ ಅರ್ಹತಾ ಪತ್ರಗಳ ಪರಿಶೀಲನೆ ನಡೆಸಿದೆ. ರೈತರು ದಾಖಲೆ ನೀಡಿದ 24 ಗಂಟೆಗಳಲ್ಲೇ ಸಾಲ ಮನ್ನಾ ಸೌಲಭ್ಯ ಕೊಡಿಸುತ್ತೇನೆ. ಯಾರೂ ಈ ವಿಚಾರವಾಗಿ ಅನುಮಾನ ಪಡುವ ಅಗತ್ಯವಿಲ್ಲ" ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ಧಾರೆ.
ಹಿರೇಕೆರೂರ ತಾಲೂಕಿನ ದೂದೀಹಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಆವರಣದಲ್ಲಿ 330 ಕೋ.ರೂ.ವೆಚ್ಚದ ವಿವಿಧ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, "ರೈತರ ಹೊಲಕ್ಕೆ ನೀರು, ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಕೊಟ್ಟಾಗ ಮಾತ್ರ ರೈತ ನೆಮ್ಮದಿ, ಗೌರವ ಮತ್ತು ಸ್ವಾಭಿಮಾನದಿಂದ ಬಾಳಿ ಬದುಕಲು ಸಾಧ್ಯ ಎಂದು ನನಗೆ ತಿಳಿದಿದೆ. ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಅನ್ನದಾತ ನೆಮ್ಮದಿಯಿಂದ ಬದುಕಬೇಕು ಎಂಬುದೇ ನಮ್ಮ ಸಂಕಲ್ಪ" ಎಂದು ತಿಳಿಸಿದರು.
"ಏತ ನೀರಾವರಿ ಯೋಜನೆಗೆ ಹಣಕಾಸಿನ ಇತಿಮಿತಿಯಲ್ಲೇ ಬಜೆಟ್ನಲ್ಲಿ ರಾಜ್ಯದ ರೈತರಿಗೆ ಕೊಡುಗೆ ಕೊಡುವ ಮೂಲಕ 5,000 ಕೋ.ರೂ.ಗಳನ್ನು ತೆಗೆದಿರಿಸಿದ್ದೇವೆ. ಈ ಮುಖಾಂತರ ರಾಜ್ಯದ ಎಲ್ಲಾ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಬೇಕೆಂಬ ಸಂಕಲ್ಪ ಹೊಂದಿದ್ದೇವೆ" ಎಂದರು.