ನವದೆಹಲಿ, ಮಾ.07 (DaijiworldNews/PY) : 8 ವರ್ಷದ ಬಾಲಕಿ, ಪರಿಸರ ಹೋರಾಟಗಾರ್ತಿ ಲಿಸಿಪ್ರಿಯಾ ಕಂಗುಜಮ್ ಅವರು ಪ್ರಧಾನಿ ಮೋದಿ ಅವರ ಆಹ್ವಾನವನ್ನು ತಿರಸ್ಕರಿಸಿದ್ದಾರೆ.
ಮಾ.8 ಭಾನುವಾರದಂದು ಮಹಿಳಾ ದಿನಾಚರಣೆ ಇರುವ ಹಿನ್ನೆಲೆ ತಮ್ಮ ಸಾಮಾಜಿಕ ಜಾಲತಾಣವನ್ನು ನಿರ್ವಹಿಸುವಂತೆ ಶೀ ಇನ್ಸ್ಪೈರ್ಸ್ ಯೂ #SheInspiresUs ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಮಹಿಳಾ ಸಾಧಕಿಯರಿಗೆ ಪ್ರಧಾನಿ ಮೋದಿ ಆಹ್ವಾನ ನೀಡಿದ್ದರು. ಆದರೆ ಮಣಿಪುರದ ಲಿಸಿಪ್ರಿಯಾ ಕಂಗುಜಮ್ ಈ ಆಹ್ವಾನವನ್ನು ನಿರಾಕರಿಸಿದ್ದಾರೆ.
ಈ ವಿಚಾರದ ಬಗ್ಗೆ ಟ್ವೀಟ್ ಮಾಡಿರುವ ಲಿಸಿಪ್ರಿಯಾ ಅವರು, "ಮೋದಿಯವರೇ ನೀವು ಪ್ರಾರಂಭಿಸಿರುವ ಶೀ ಇನ್ಸ್ಪೈರ್ಸ್ ಯೂ ಅಭಿಯಾನದಲ್ಲಿ ನಾನು ಭಾಗವಹಿಸಿವುದಿಲ್ಲ. ನನ್ನ ಭೂಮಿ ರಕ್ಷಣೆ ಕುರಿತ ಕೂಗನ್ನು ಕೇಳಿಸಿಕೊಳ್ಳದ ಹೊರತು ನೀವು ನನ್ನ ಕಾರ್ಯಗಳನ್ನು ಸಂಭ್ರಮಿಸಬೇಡಿ. ನಿಮ್ಮ ಈ ಆಹ್ವಾನವನ್ನು ನಾನು ನಿರಾಕರಿಸುತ್ತೇನೆ" ಎಂದು ತಿಳಿಸಿದ್ದಾರೆ.
ಇದಕ್ಕೂ ಮೊದಲು ಟ್ವೀಟ್ ಮಾಡಿದ್ದ ಪ್ರಧಾನಿ ಮೋದಿ ಅವರು, ಈ ಮಹಿಳಾ ದಿನದಂದು ತಮ್ಮ ಬದುಕು ಹಾಗೂ ಕೆಲಸದ ಮೂಲಕ ನಮ್ಮ ಬದುಕಿಗೆ ಸ್ಫೂರ್ತಿ ನೀಡಲು ಮಹಿಳೆಯರಿಗೆ ನನ್ನ ಸಾಮಾಜಿಕ ಜಾಲತಾಣದ ಖಾತೆಯನ್ನು ಬಿಟ್ಟುಕೊಡುತ್ತೇನೆ. ಇದು ಲಕ್ಷಾಂತರ ಜನರಿಗೆ ಸ್ಪೂರ್ತಿಯಾಗುತ್ತದೆ. ನೀವು ಅಂತಹ ಮಹಿಳೆಯಾ? ಅಥವಾ ನಿಮಗೆ ಅಂತಹ ಮಹಿಳೆಯರ ಬಗ್ಗೆ ತಿಳಿದಿದೆಯಾ?ಅಂತಹ ವಿಷಯಗಳನ್ನು ಶೀ ಇನ್ಸ್ಪೈರ್ಸ್ ಅಸ್ ಹ್ಯಾಷ್ಟ್ಯಾಗ್ನಲ್ಲಿ ಹಂಚಿಕೊಳ್ಳಿ ಎಂದು ತಿಳಿಸಿದ್ದರು.
ಪ್ರಧಾನಿ ಮೋದಿ ಅವರ ಟ್ವೀಟ್ ಹಿನ್ನೆಲೆ ಲಿಸಿಪ್ರಿಯಾ ಕಂಗುಜಮ್ ಅವರನ್ನು ಭಾರತದ ಸರ್ಕಾರದ ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕ ಪರಿಚಯಿಸಲಾಗಿತ್ತು. ನಂತರ ಮೋದಿ ಅವರು ಲಿಸಿಪ್ರಿಯಾ ಕಂಗುಜಮ್ ಅವರಿಗೆ ಆಹ್ವಾನ ನೀಡಿದ್ದರು. ಆದರೆ ಲಿಸಿಪ್ರಿಯಾ ಕಂಗುಜಮ್ ಅವರು ಆಹ್ವಾನವನ್ನು ನಿರಾಕರಿಸಿದ್ದಾರೆ. ಹಾಗಾಗಿ ಮಾ.8 ಭಾನುವಾರದಂದು ಭಾರತದ ಮೊದಲ ಪ್ಯಾರಟ್ರೂಪರ್ ತಂಡದ ಕ್ಯಾಪ್ಟನ್ ಆಗಿದ್ದ ರುಚಿ ಶರ್ಮಾ ಅವರು ಪ್ರಧಾನಿ ಮೋದಿ ಅವರ ಸಾಮಾಜಿಕ ಜಾಲತಾಣದ ಖಾತೆಗಳನ್ನು ನಿರ್ವಹಿಸಲಿದ್ದಾರೆ.