ಮುಂಬೈ, ಮಾ. 08 (Daijiworld News/MB) : ಆರ್ಥಿಕವಾಗಿ ಬಿಕ್ಕಟ್ಟಿನಲ್ಲಿರುವ ಖಾಸಗಿ ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ.
ಶನಿವಾರ ರಾಣಾ ಕಪೂರ್ ಅವರನ್ನು ಸುದೀರ್ಘ ವಿಚಾರಣೆ ನಡೆಸಿದ ಇಡಿ ಅಧಿಕಾರಿಗಳು, ಭಾನುವಾರ ಬೆಳ್ಳಂಬೆಳ್ಳಗೆ ಅವರನ್ನು ಬಂಧನ ಮಾಡಿದ್ದು ಕಚೇರಿಯಲ್ಲಿ ವಿಚಾರಣೆ ನಡೆಯಲಿದೆ.
ಮುಂಬೈನ ಸಮುದ್ರ ಮಹಲ್ನಲ್ಲಿರುವ ರಾಣಾ ಕಪೂರ್ ನಿವಾಸಕ್ಕೆ ಈಗಾಗಲೇ ದಾಳಿ ಮಾಡಿರುವ ಇಡಿ ಅಧಿಕಾರಿಗಳು, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ರಾಣಾ ಕಪೂರ್ ಸಂಸ್ಥಾಪನೆಯ ಯೆಸ್ ಬ್ಯಾಂಕ್ ಈಗ ಆರ್ಥಿಕವಾಗಿ ದಿವಾಳಿಯಾಗಿದ್ದು ಆರ್ಬಿಐ ಬ್ಯಾಂಕ್ ಆಡಳಿತವನ್ನು ಪಡೆದುಕೊಂಡಿದೆ. ಯೆಸ್ ಬ್ಯಾಂಕ್ ಆರ್ಥಿಕ ಬಿಕ್ಕಟ್ಟು ಅನುಭವಿಸಲು ಹಿರಿಯ ಅಧಿಕಾರಿಗಳ ಅಕ್ರಮ ಕಾರಣ ಎಂದು ಹೇಳಲಾಗಿದ್ದು ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಅವರನ್ನು ನಿವಾಸಕ್ಕೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದು ಈಗ ಬಂಧನ ಮಾಡಿದ್ದಾರೆ.
ಹೆಚ್ಚಿನ ವಿಚಾರಣೆಗಾಗಿ ಬಂಧನ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಯೆಸ್ ಬ್ಯಾಂಕ್ ಆಡಳಿತವನ್ನು ಆರ್ಬಿಐ ತನ್ನ ಹಿಡಿತಕ್ಕೆ ಪಡೆದಿದ್ದು ಬ್ಯಾಂಕ್ ಪುನರುಜ್ಜೀವನಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ.