ಬೆಂಗಳೂರು, ಮಾ. 08 (Daijiworld News/MB) : ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರಿಗಾಗಿ ಜಾರಿ ಮಾಡಿದ್ದ 'ಶಾದಿ ಭಾಗ್ಯ' ಯೋಜನೆಯನ್ನು ರಾಜ್ಯದ ಬಿಜೆಪಿ ಸರ್ಕಾರ ರದ್ದು ಪಡಿಸಿದ್ದು ಹಲವು ಶಾಸಕರು ಸರ್ಕಾರದ ಈ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಶನಿವಾರ ಈ ಯೋಜನೆ ರದ್ದು ಕುರಿತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕೃತ ಸುತ್ತೋಲೆ ಹೊರಡಿಸಿದ್ದು 2020-21ನೇ ಸಾಲಿನ ಮುಂಗಡ ಪತ್ರದಲ್ಲಿ ಬಿದಾಯಿ ಯೋಜನೆಯಡಿ (ಶಾದಿ ಭಾಗ್ಯ) ಆರ್ಥಿಕ ಇಲಾಖೆಯು ಅನುದಾನ ನಿಗದಿಪಡಿಸದೇ ಇರುವುದರಿಂದ ಹೊಸ ಅರ್ಜಿಗಳ ಸ್ವೀಕೃತಿಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ನಿಲ್ಲಿಸಬೇಕೆಂದು ಅಲ್ಪಸಂಖ್ಯಾತರ ನಿರ್ದೇಶನಾಲಯ ಹೇಳಿದೆ.
ಹೊಸ ಅರ್ಜಿಗಳ ಸ್ವೀಕಾರ ನಿಲ್ಲಿಸಿ, ಈಗಾಗಲೇ ಮಂಜೂರಿಗೆ ಬಾಕಿ ಇರುವ ಅರ್ಹ ಅರ್ಜಿಗಳ ಮಾಹಿತಿಯನ್ನು ಕಡ್ಡಾಯವಾಗಿ ಮಾರ್ಚ್ 9ರೊಳಗೆ ಕಳುಹಿಸಿಕೊಡಬೇಕು ಎಂದು ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಒಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಇಲಾಖೆಯ ನಿರ್ದೇಶಕರು ಸೂಚಿಸಿದ್ದಾರೆ.
ಈ ಯೋಜನೆಯಡಿ ಆರ್ಥಿಕವಾಗಿ ಹಿಂದುಳಿದ ಮುಸ್ಲಿಂ, ಜೈನ, ಕ್ರಿಶ್ಚಿಯನ್, ಬೌದ್ಧರು, ಸಿಖ್ ಹಾಗೂ ಪಾರ್ಸಿ (ಅಲ್ಪಸಂಖ್ಯಾತ) ಸಮುದಾಯಕ್ಕೆ ಸೇರಿದ ಹೆಣ್ಣು ಮಕ್ಕಳು, ವಿಧವೆಯರು, ವಿಚ್ಛೇದಿತ ಮಹಿಳೆಯರ ವೈಯಕ್ತಿಕ/ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ರಾಜ್ಯ ಸರಕಾರ 50 ಸಾವಿರ ರೂ. ಸಹಾಯಧನ ನೀಡುತ್ತಿತ್ತು. ಈ ಯೋಜನೆಗೆ ಬಿಪಿಎಲ್ ಕುಟುಂಬಕ್ಕೆ ಸೇರಿದ ಹಾಗೂ ವಾರ್ಷಿಕ 1.5 ಲಕ್ಷ ಆದಾಯವುಳ್ಳವರ ಕುಟುಂಬದ ಹೆಣ್ಣು ಮಕ್ಕಳು ಅರ್ಹರಾಗಿದ್ದರು.
ಈ ಬೆಳವಣಿಗೆಗಳ ಬಗ್ಗೆ ಹಲವು ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಶಾಸಕರಾದ ಯು.ಟಿ.ಖಾದರ್, ಜಮೀರ್ ಅಹಮದ್, ಎನ್.ಎ.ಹ್ಯಾರೀಸ್, ತನ್ವೀರ್ ಸೇಠ್, ರಿಜ್ವಾನ್ ಅರ್ಷದ್ ಅವರು ಯಾವುದೇ ಕಾರಣಕ್ಕೂ ಶಾದಿ ಭಾಗ್ಯ ಯೋಜನೆ ರದ್ದುಪಡಿಸಬಾರದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಒತ್ತಾಯಿಸಿದ್ದರು.
ಈ ಬಗ್ಗೆ ವಿರೋಧ ವ್ಯಕ್ತಪಡಿಸಿರುವ ಶಾಸಕ ಯು.ಟಿ. ಖಾದರ್, "ರಾಜ್ಯ ಸರಕಾರದ ಬಳಿ ಹಣ ಇಲ್ಲದ ಕಾರಣ ಜನಪ್ರಿಯ ಯೋಜನೆಗಳನ್ನು ರದ್ದುಪಡಿಸುವ ಮುನ್ಸೂಚನೆ 'ಶಾದಿ ಭಾಗ್ಯ' ಯೋಜನೆ ಸ್ಥಗಿತದಿಂದ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಜನಪರ ಯೋಜನೆಗಳು ರದ್ದಾದರೂ ಅಚ್ಚರಿ ಇಲ್ಲ. ಸರಕಾರದ ಆರ್ಥಿಕ ಪರಿಸ್ಥಿತಿ ಸರಿ ಇಲ್ಲಎಂಬುದು ಇದರಿಂದಲೇ ತಿಳಿದಿದೆ" ಎಂದು ಹೇಳಿದ್ದಾರೆ.
ಪ್ರಸ್ತುತ ಮುಖ್ಯಮಂತ್ರಿಯಾಗಿರುವ ಬಿ.ಎಸ್.ಯಡಿಯೂರಪ್ಪ ಅವರು ಆರ್ಥಿಕವಾಗಿ ಹಿಂದುಳಿದ ಎಲ್ಲಾ ಜಾತಿ, ಧರ್ಮದ ಹೆಣ್ಣು ಮಕ್ಕಳಿಗೂ ಈ ಯೋಜನೆ ವಿಸ್ತರಿಸಬೇಕೆಂದು ಪಟ್ಟು ಹಿಡಿದು 2013ರ ಬೆಳಗಾವಿ ಅಧಿವೇಶನದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಿದ್ದರು.