ನವದೆಹಲಿ, ಮಾ. 08 (Daijiworld News/MB) : ವಿಶ್ವಾದಾದ್ಯಂತ ಜನರಲ್ಲಿ ಆತಂಕ ಸೃಷ್ಟಿಸಿರುವ ಕೊರೊನಾ ವೈರಸ್ ಭಾರತದಲ್ಲಿ ಈಗಾಗಲೇ ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಮತ್ತೆ ಮೂರು ಪ್ರಕರಣಗಳು ದೃಢ ಪಟ್ಟಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಉತ್ತರದ ಲಡಾಕ್ನಲ್ಲಿ ಇಬ್ಬರಿಗೆ ಹಾಗೂ ದಕ್ಷಿಣದ ತಮಿಳುನಾಡಿನಲ್ಲಿ ಒಬ್ಬರಿಗೆ ಕೊರೊನಾ ವೈರಸ್ ಸೋಂಕು ತಗಲಿರುವುದು ದೃಢಪಟ್ಟಿದ್ದು ಈ ಮೊದಲು ಈ ಎರಡು ರಾಜ್ಯ/ ಕೇಂದ್ರಾಡಳಿತ ಪ್ರದೇಶದಲ್ಲಿ ಯಾವ ಪ್ರಕರಣವೂ ವರದಿಯಾಗಿರಲಿಲ್ಲ.
ಭೂತಾನ್ನಲ್ಲಿ 76 ವರ್ಷದ ಅಮೆರಿಕನ್ ಪ್ರಜೆಗೆ ಸೋಂಕು ತಗಲಿದ್ದು ಈ ಹಿನ್ನಲೆಯಲ್ಲಿ ಈಶಾನ್ಯ ರಾಜ್ಯವಾದ ಅಸ್ಸಾಂನಲ್ಲಿ ನೈರ್ಮಲ್ಯ ಮತ್ತು ಸಂಪರ್ಕ ತಡೆ ಕಾರ್ಯವನ್ನು ಕೈಗೊಳ್ಳಲಾಗಿದೆ.
ಈ ವ್ಯಕ್ತಿಯು ಬ್ರಹ್ಮಪುತ್ರಾ ನದಿ ವಿಹಾರ ಹಾಗೂ ಜೋಹ್ರತ್ ರೆಸಾರ್ಟ್ನಲ್ಲಿ ವಾಸ್ತವ್ಯ ಮಾಡಿದ್ದ ಹಿನ್ನಲೆಯಲ್ಲಿ ಎಚ್ಚರ ವಹಿಸಲಾಗಿದೆ. ಈ ವ್ಯಕ್ತಿ ಸಂಪರ್ಕದಲ್ಲಿದ್ದ 150 ಮಂದಿಯ ಮೇಲೆ ನಿಗಾ ವಹಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಒಟ್ಟು ದೇಶದಲ್ಲಿ 34 ಕೊರೊನಾ ವೈರಸ್ ಪ್ರಕರಣಗಳು ದೃಢಪಟ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.