ಹೈದರಬಾದ್, ಮಾ. 08 (Daijiworld News/MB) : "ಎನ್ಪಿಆರ್ಗೆ ದಾಖಲೆ ನೀಡಲು ನನ್ನ ಬಳಿಯೇ ಜನನ ಪ್ರಮಾಣಪತ್ರ ಇಲ್ಲ" ಎಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ಹೇಳಿದ್ದಾರೆ.
ಈ ಕುರಿತು ರಾಜ್ಯ ವಿಧಾನಸಭೆಯಲ್ಲಿ ಮಾತನಾಡಿದ ಕೆಸಿಆರ್, "ಜನನ ಪ್ರಮಾಣಪತ್ರ ನನ್ನ ಬಳಿಯೇ ಇಲ್ಲ. ಹಾಗಿರುವಾಗಿ ಇನ್ನು ನನ್ನ ತಂದೆಯ ಜನನ ಪ್ರಮಾಣಪತ್ರ ಎಲ್ಲಿಂದ ತರಲಿ" ಎಂದಿದ್ದಾರೆ.
"ಕುಗ್ರಾಮದ ಮನೆಯೊಂದರಲ್ಲಿ ನಾನು ಜನಿಸಿದ್ದೇನೆ. ನಾನು ಜನಿಸಿದ ಕಾಲದಲ್ಲಿ ನಮ್ಮ ಗ್ರಾಮದ ಸುತ್ತ ಯಾವುದೇ ಆಸ್ಪತ್ರೆಗಳಿರಲಿಲ್ಲ. ಹಾಗಾಗಿ ಪದ್ಧತಿಯಂತೆ ಗ್ರಾಮದ ಹಿರಿಯರು ನನ್ನ 'ಜನ್ಮ ನಾಮಾ' ಸಿದ್ದಪಡಿಸಿದ್ದಾರೆ. ಆದರೆ ಅದಕ್ಕೆ ಯಾವುದೇ ಮುದ್ರೆಗಳು ಇಲ್ಲ" ಎಂದಿದ್ದಾರೆ.
"ಮುಖ್ಯಮಂತ್ರಿಯಾದ ನನ್ನ ಬಳಿಯೇ ಜನನ ಪ್ರಮಾಣಪತ್ರ ಇಲ್ಲ ಎಂದಾಗ ರಾಜ್ಯದ ಬಡ ಜನರ ಬಳಿ ಜನನ ಪ್ರಮಾಣಪತ್ರ ಎಲ್ಲಿಂದ ಬರಬೇಕು . ಕೇಂದ್ರ ಸರ್ಕಾರದ ಹೊಸ ಎನ್ಪಿಆರ್ ನೀತಿ ಹಲವು ಗೊಂದಲಗಳನ್ನು ಸೃಷ್ಟಿಸಲಿದೆ" ಎಂದು ತಿಳಿಸಿದರು.
ಈ ಸಂದರ್ಭದಲ್ಲೇ ಸಿಎಎ ಕುರಿತೂ ವಿರೋಧ ವ್ಯಕ್ತಪಡಿಸಿದ ಅವರು, "ವಿವಾದಾತ್ಮಕ ಕಾಯ್ದೆ ಸಂವಿಧಾನದ ಮೂಲಭೂತ ಆಶಯಗಳಿಗೆ ಧಕ್ಕೆ ತರಲಿದೆ. ಟಿಆರ್ಎಸ್ ಒಂದು ನಿರ್ದಿಷ್ಟ ರಾಜಕೀಯ ಸಿದ್ಧಾಂತ ಹೊಂದಿದೆ. ಅದನ್ನು ಬದಲು ಮಾಡುವ ಪ್ರಶ್ನೆಯೇ ಇಲ್ಲ" ಎಂದು ಅವರು ಸ್ಪಷ್ಟಪಡಿಸಿದರು.