ದಾವಣಗೆರೆ , ಮಾ. 08 (Daijiworld News/MB) : ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅಲ್ಪಸಂಖ್ಯಾತರಿಗಾಗಿ ಜಾರಿಗೆ ತಂದಿದ್ದ ಶಾದಿ ಭಾಗ್ಯ ಯೋಜನೆ ಪ್ರಸ್ತುತ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ರದ್ದು ಪಡಿಸಿದ್ದು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಅವರು, "ಶಾದಿ ಭಾಗ್ಯ ರದ್ದು ಮಾಡುವ ಮೂಲಕ ಬಿಜೆಪಿ ಅಲ್ಪಸಂಖ್ಯಾತರ ವಿರೋಧಿ ಎಂಬುದು ಸಾಬೀತು ಮಾಡಿದೆ" ಎಂದು ಹೇಳಿದ್ದಾರೆ.
ಈ ಕುರಿತಾಗಿ ದಾವಣಗೆರೆಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, "ಯಾರಿಗೂ ತಾರತಮ್ಯ ಮಾಡಬಾರದು ಎಂದು ಸಂವಿಧಾನದ ಆರ್ಟಿಕಲ್ 14ರಲ್ಲಿ ಉಲ್ಲೇಖಿತವಾಗಿದೆ. ಆದರೆ ಬಿಜೆಪಿ ಸರ್ಕಾರ ಸಂವಿಧಾನ ವಿರೋಧಿ. ಈಗ ಶಾದಿ ಭಾಗ್ಯ ರದ್ದು ಮಾಡುವ ಮೂಲಕ ತಾನು ಅಲ್ಪಸಂಖ್ಯಾತರ ವಿರೋಧಿ ಎನ್ನುವುದನ್ನೂ ಸಾಬೀತು ಮಾಡಿದೆ" ಎಂದು ಆಕ್ರೋಶಗೊಂಡರು.
ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ, ಮುಂದಿನ ದಿನಗಳಲ್ಲಿ ಸಿದ್ಧರಾಮಯ್ಯ ಬಿಜೆಪಿಗೆ ಬರಲಿದ್ದು, ಅವರಿಗೆ ಕೇಂದ್ರ ಮಂತ್ರಿ ಸ್ಥಾನ ಕೊಡುವುದು ಖಚಿತ ಎಂದು ಹೇಳಿದ್ದರು. ಈ ಕುರಿತಾಗಿ ಸ್ಪಷ್ಟನೆ ನೀಡಿರುವ ಸಿದ್ದರಾಮಯ್ಯ, " ಸಾಮಾಜಿಕ ನ್ಯಾಯದ ಕಡೆಗೆ ನನ್ನ ರಾಜಕೀಯ ಹೋರಾಟ. ನಾನು ಬಿಜೆಪಿ ಪಕ್ಷಕ್ಕೆ ಸೇರುತ್ತೇನೆ ಎನ್ನುವುದು ಮೂರ್ಖತನದ ಹೇಳಿಕೆ. ರಾಜಕೀಯ ಸಿದ್ಧಾಂತವಿರುವವರು ಬೇರೆ ಪಕ್ಷಕ್ಕೆ ಹೋಗುತ್ತಿರಲಿಲ್ಲ"ಎಂದು ಕಿಡಿಕಾರಿದರು.