ಬೆಂಗಳೂರು, ಮಾ. 08 (Daijiworld News/MB) : ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು ವಿಶ್ವ ಮಹಿಳಾ ದಿನಾಚರಣೆಗೆ ಶುಭ ಕೋರಿದ್ದು ಮಹಿಳಾ ಮೀಸಲು ಮಸೂದೆಯನ್ನು ಜಾರಿಗೆ ತರಬೇಕೆಂದು ಪ್ರಧಾನಿ ಮೋದಿಯವರಲ್ಲಿ ಮನವಿ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ನಾಡಿನ ಸಮಸ್ತ ಮಹಿಳೆಯರಿಗೆ ವಿಶ್ವ ಮಹಿಳಾ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ಮಹಿಳೆಯರು ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕವಾಗಿ ಪ್ರಬಲವಾದರೆ ಮಾತ್ರ ನಮ್ಮ ದೇಶ ಅಭಿವೃದ್ಧಿಯಾಗಲು ಸಾಧ್ಯ.ಈ ಕಾರಣದಿಂದ ನಾನು ಮುಖ್ಯಮಂತ್ರಿಯಾಗಿದ್ದಾಗ ಸ್ಥಳೀಯ ಸಂಸ್ಥೆಗಳಲ್ಲಿ, ಸರ್ಕಾರಿ ಕೆಲಸಗಳಲ್ಲಿ 'ಮಹಿಳಾ ಮೀಸಲಾತಿ'ಯನ್ನು ತಂದಿದ್ದೆ" ಎಂದು ಹೇಳಿದ್ದಾರೆ.
ನಾನು 1996ರಲ್ಲಿ ಪ್ರಧಾನಿಯಾದ ಸಂದರ್ಭದಲ್ಲಿ ಲೋಕಸಭೆ ಹಾಗೂ ವಿಧಾನಸಭೆಯಲ್ಲಿ 'ಮಹಿಳಾ ಮೀಸಲಾತಿ'ಗಾಗಿ ಮಸೂದೆಯನ್ನು ಮಂಡನೆ ಮಾಡಿದ್ದೆ. ಈ 'ಮಹಿಳಾ ಮೀಸಲಾತಿ 'ಯನ್ನು ಜಾರಿಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.
ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲು ಕಲ್ಪಿಸುವ ಮಹಿಳಾ ಮೀಸಲು ಮಸೂದೆಯು ಸಂಸತ್ನ ಒಪ್ಪಿಗೆಗಾಗಿ ಬಾಕಿ ಉಳಿದಿದ್ದು ಈ ಮಸೂದೆಯು 1996ರ ಸೆ. 12ರಂದು, ದೇವೇಗೌಡರ ಸಂಯುಕ್ತ ರಂಗದ ಅಧಿಕಾರವಧಿಯಲ್ಲಿ ಮೊದಲ ಬಾರಿಗೆ ಮಂಡನೆಯಾಗಿತ್ತು.