ಅಲಹಾಬಾದ್, ಮಾ. 08 (Daijiworld News/MB) : ಉತ್ತರ ಪ್ರದೇಶ ಅಧಿಕಾರಿಗಳು ಲಖನೌನಲ್ಲಿ ನಡೆದ ಪೌರತ್ವ ಕಾಯ್ದೆ ವಿರೋಧಿ ಹೋರಾಟದಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಗಳ ಚಿತ್ರ ಮತ್ತು ವಿವರ ಪ್ರಕಟಿಸಿದ್ದು ಈ ವಿಚಾರವಾಗಿ ಅಲಹಾಬಾದ್ ಹೈಕೋರ್ಟ್ ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡಿದೆ.
ಈ ವಿಚಾರವಾಗಿ ಭಾನುವಾರ ಬೆಳಿಗ್ಗೆ ವಿಶೇಷ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಗೋವಿಂದ್ ಮಾಥುರ್, ನ್ಯಾಯಮೂರ್ತಿ ರಮೇಶ್ ಸಿನ್ಹಾ ಅವರಿದ್ದ ನ್ಯಾಯಪೀಠವು, "ಪ್ರತಿಭಟನಕಾರರ ಚಿತ್ರ ಹಾಗೂ ವಿವರಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದ್ದು ಅತಿರೇಕದ ಪರಮಾವಧಿ. ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತಂದ ಕ್ರಮ ಎಂದು ಟೀಕೆ ಮಾಡಿದೆ.
ಡಿಸೆಂಬರ್ 19, 2019ರಂದು ಲಖನೌ ನಗರದಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು ಎನ್ನಲಾದ 60 ಮಂದಿಯ ಭಾವಚಿತ್ರ ಮತ್ತು ವಿವರಗಳನ್ನು ಲಖನೌ ನಗರಾಡಳಿತ ಪ್ರಮುಖ ವೃತ್ತಗಳಲ್ಲಿ ಪ್ರದರ್ಶಿಸಿತ್ತು. ಅವರ ಮೇಲೆ ಸಾರ್ವಜನಿಕ ಆಸ್ತಿಯನ್ನು ಹಾಳುಮಾಡಿದ ಆರೋಪವನ್ನು ಹೊರಿಸಲಾಗಿತ್ತು.
ಸರ್ಕಾರದ ವಕ್ತಾರರು ಈ ಪೋಸ್ಟರ್ಗಳನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸೂಚನೆ ಮೇರೆಗೆ ಲಖನೌದ ಹಫ್ತಾರ್ಜಂಗ್, ವಿಧಾನಸಭೆಯ ಎದುರು ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಅಳವಡಿಸಲಾಗಿತ್ತು ಎಂದು ಹೇಳಿದ್ದರು.
ಈ ಚಿತ್ರ ಪ್ರಕಟ ಮಾಡಿದ ಬ್ಯಾನರ್ ಒಂದರಲ್ಲಿ ಚಳಿವಳಿಗಾರ ಸದಾಫ್ ಜಾಫರ್, ಮಾನವಹಕ್ಕು ಹೋರಾಟಗಾರ ಮತ್ತು ವಕೀಲ ಮೊಹಮದ್ ಶೋಯೆಬ್, ಮಾಜಿ ಐಪಿಎಸ್ ಅಧಿಕಾರಿ ಎಸ್.ಆರ್.ದಾರಾಪುರಿ ಇತರರ ಚಿತ್ರ ಮತ್ತು ವಿವರಗಳೂ ಕಾಣಿಸಿಕೊಂಡಿದ್ದವು.
ವಿಭಾಗೀಯ ನ್ಯಾಯಪೀಠವು ಆರೋಪಿಗಳ ವಿವರಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದ್ದನ್ನು ಗಂಭೀರವಾಗಿ ಪರಿಗಣಿಸಿ ಭಾನುವಾರ ಬೆಳಿಗ್ಗೆ 10 ಗಂಟೆಗೆ ವಿಶೇಷ ವಿಚಾರಣೆ ನಡೆಸಿದ್ದು ಮಧ್ಯಾಹ್ನ 3 ಗಂಟೆಯ ಒಳಗೆ ಸರ್ಕಾರವು ಇಂಥ ಬ್ಯಾನರ್ಗಳನ್ನು ತೆರವುಗೊಳಿಸಿ, ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕು ಎಂದು ಆದೇಶ ಮಾಡಿದೆ.