ನವದೆಹಲಿ, ಮಾ. 08 (Daijiworld News/MB) : ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಮಾಧ್ಯಮದ ಮೂಲಕ ಆರಂಭ ಮಾಡಿರುವ #SheinspIresus ಅಭಿಯಾನದಲ್ಲಿ ಭಾಗಿಯಾಗಲ್ಲ ಎಂದು ಹೇಳಿದ ಪರಿಸರ ಹೋರಾಟಗಾರ್ತಿ ಲಿಸಿಪ್ರಿಯಾ ಕಂಗುಜಮ್ ಅವರನ್ನು ಕಾಂಗ್ರೆಸ್ ಬೆಂಬಲ ಮಾಡಿದ್ದು ಕಾಂಗ್ರೆಸ್ಗೂ ಕೂಡಾ ಪರಿಸರ ಹೋರಾಟಗಾರ್ತಿ ತನ್ನ ಟ್ವೀಟರ್ನಲ್ಲಿ ತಿರುಗೇಟು ನೀಡಿದ್ದಾರೆ.
ಲಿಸಿಪ್ರಿಯಾ ಕಂಗುಜಮ್ ಅವರು, "ನರೇಂದ್ರ ಮೋದಿ ಅವರೇ, ನನ್ನ ಕೂಗನ್ನು ಕೇಳಿಸಿಕೊಳ್ಳದ ಹೊರತು ನೀವು ನನ್ನ ಕೆಲಸಗಳನ್ನು ಸಂಭ್ರಮಿಸಬೇಡಿ. ನಿಮ್ಮ ಕರೆಯ ಮೇರೆಗೆ ಆರಂಭವಾದ #SheInspiresUs ಅಭಿಯಾನದಲ್ಲಿ ನನ್ನನ್ನೂ ಪರಿಗಣಿಸಿದಕ್ಕೆ ಧನ್ಯವಾದಗಳು. ತುಂಬಾ ಯೋಚಿಸಿದ ನಂತರ ನಾನು ಈ ಗೌರವವನ್ನು ನಿರಾಕರಿಸಲು ತೀರ್ಮಾನಿಸಿದ್ದೇನೆ" ಎಂದು ಶನಿವಾರ ಟ್ವೀಟ್ ಮಾಡಿದ್ದರು.
ಈ ಟ್ವೀಟ್ನ್ನು ಉಲ್ಲೇಖ ಮಾಡಿದ ಕಾಂಗ್ರೆಸ್, "ಪರಿಸರ ಹೋರಾಟಗಾರ್ತಿ ಲಿಸಿಪ್ರಿಯಾ ಮೋದಿ ಅವರ ಬಾಯಿ ಮಾತಿನ, ಬೂಟಾಟಿಕೆಯ ಮಹಿಳಾ ಕಲ್ಯಾಣ ಕಾರ್ಯವನ್ನು ಧಿಕ್ಕರಿಸಿದ್ದಾರೆ. ಮೋದಿ ಅಭಿಯಾನದಲ್ಲಿ ಪಾಲ್ಗೊಳ್ಳುವುದನ್ನು ನಿರಾಕರಿಸಿರುವ ಆಕೆ, ಯಾವುದೇ ಟ್ವಿಟರ್ ಅಭಿಯಾನಕ್ಕಿಂತಲೂ ಹವಾಮಾನ ಬದಲಾವಣೆಗೆ ಸಂಬಂಧಿಸಿದ ತನ್ನ ಕೂಗು ಕೇಳುವುದು ಮುಖ್ಯ ಎಂದು ಹೇಳಿದ್ದಾರೆ" ಎಂದು ಟ್ವೀಟ್ ಮಾಡಿತ್ತು.
ಕಾಂಗ್ರೆಸ್ನ ಈ ಟ್ವೀಟ್ಗೆ ತಿರುಗೇಟು ನೀಡಿರುವ ಲಿಸಿಪ್ರಿಯಾ, "ಸರಿ, ನಿಮಗೆ ನನ್ನ ಮೇಲೆ ಕರುಣೆಯಿದೆ, ಪರವಾಗಿಲ್ಲ. ಈಗ ನೇರವಾಗಿ ವಿಷಯಕ್ಕೆ ಬರುವ. ನಿಮ್ಮ ಎಷ್ಟು ಸಂಸದರು ರಾಜ್ಯ ಸಭೆ ಹಾಗೂ ಲೋಕ ಸಭೆಯಲ್ಲಿ ನನ್ನ ಬೇಡಿಕೆಯ ಕುರಿತಾಗಿ ಮಾತನಾಡಲ್ಲಿದ್ದೀರಿ? ಹಾಗೆಯೇ ನೀವು ಕೇವಲ ಟ್ವೀಟರ್ ಕ್ಯಾಂಪೇನ್ಗಾಗಿ ನನ್ನ ಹೆಸರನ್ನು ಬಳಸುವುದು ಬೇಡ. ನನ್ನ ಕೂಗನ್ನು ಕೇಳುವವರು ಯಾರು? ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ, ‘ಆಡಳಿತ ಮತ್ತು ವಿರೋಧ ಪಕ್ಷಗಳು ನನ್ನನ್ನು ರಾಜಕೀಯಕ್ಕಾಗಿ ಚೆಂಡಿನಂತೆ ಬಳಸಿಕೊಳ್ಳುತ್ತಿವೆ. ಆದರೆ, ನನ್ನ ಬೇಡಿಕೆ ಮತ್ತು ಹೋರಾಟಗಳು ಇದೆಲ್ಲಕ್ಕಿಂತಲೂ ದೂರವಿದೆ. ನಿಮ್ಮ ನಡವಳಿಕೆಗಳು ಸರಿಯಲ್ಲ. ಇದನ್ನು ನಾನು ಸಹಿಸಲಾರೆ. ನಾನು ಅನುಭವಿಸುತ್ತಿರುವ ನೋವುಗಳಿಗೆ ಉತ್ತರವಾಗಿ ನನ್ನ ಬೇಡಿಕೆಗಳನ್ನು ಸಂಸತ್ನಲ್ಲಿ ಪ್ರಸ್ತಾಪಿಸುವುದಾಗಿ ಮತ್ತು ನನ್ನ ವಿಚಾರಗಳನ್ನು ಖಾಸಗಿ ವಿದೇಯಕವಾಗಿ ಸಂಸತ್ನಲ್ಲಿ ಮಂಡಿಸುವುದಾಗಿ ಭರವಸೆ ನೀಡುವ ಪತ್ರವೊಂದನ್ನು ರಾಜಕೀಯ ಪಕ್ಷಗಳು ಮತ್ತು ಸಂಸದರು ದಯಮಾಡಿ ಕಳುಹಿಸಿಕೊಡಿ,’ ಎಂದೂ ಆಕೆ ಟ್ವೀಟ್ ಮಾಡಿದ್ದಾರೆ.