ನವದೆಹಲಿ, ಮಾ 8 (Daijiworld News/MSP): ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರದ ಸಂದರ್ಭದಲ್ಲಿ ಯುವಕನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂಬ ಆರೋಪದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಹಿಂಸಾಚಾರ ದಿಲ್ಬಾರ್ ಸಿಂಗ್ ನೇಗಿ(20) ಎಂಬಾತನ ಹತ್ಯೆ ಮಾಡಲಾಗಿತ್ತು. ಈತ ಕೇವಲ 6 ತಿಂಗಳ ಹಿಂದಷ್ಟೇ ಈಶಾನ್ಯ ದೆಹಲಿಗೆ ಬಂದು ಜೀವನೋಪಯಕ್ಕಾಗಿ ಸಿಹಿತಿಂಡಿಗಳ ಅಂಗಡಿ ಇಟ್ಟುಕೊಂಡಿದ್ದ.
ಈತನನ್ನು ಹತ್ಯೆಮಾಡಿರುವ ಆರೋಪದ ಮೇಲೆ ಶಹನವಾಜ್ ಎಂಬುವನನ್ನು ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ದಿಲ್ಬಾರ್ ಸಿಂಗ್ ನ ಮೃತದೇಹ ಫೆಬ್ರವರಿ 26ರಂದು ಬ್ರಹ್ಮಪುರಿಯಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು
ಭಾರತೀಯ ಸೇನಾ ಪಡೆಯಲ್ಲಿ ಸೇವೆ ಸಲ್ಲಿಸಲು ಬಯಸಿದ್ದ ಈತ ಅದಕ್ಕಾಗಿ ಪ್ರಯತ್ನಿಸುತ್ತಿದ್ದ. ನಮ್ಮ ಕಿರಿಯ ಸಹೋದರನನ್ನು ನಾವು ಕಳೆದುಕೊಂಡಿದ್ದು ನಮಗೆ ನ್ಯಾಯ ಬೇಕು ಮತ್ತು ಅಪರಾಧಿಯನ್ನು ಗಲ್ಲಿಗೇರಿಸಬೇಕು ಎಂದು ಮೃತಪಟ್ಟ ನೇಗಿ ಅವರ ಸಹೋದರ ದೇವೇಂದರ್ ಸಿಂಗ್ ನೇಗಿ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದರು.
ಈಶಾನ್ಯ ದೆಹಲಿಯ ಗಲಭೆಯ ಸಂದರ್ಭದಲ್ಲಿ ದಾಖಲಾದ ಕೊಲೆ ಪ್ರಕರಣಗಳ ತನಿಖೆ ನಡೆಸುತ್ತಿರುವ ಅಪರಾಧ ವಿಭಾಗವು ಈಗ ದಿಲ್ಬಾರ್ ಸಿಂಗ್ ನೇಗಿಯನ್ನು ಹತ್ಯೆ ಮಾಡಿದ ಆರೋಪದ ಮೇಲೆ ಶಹನವಾಜ್ನನ್ನು ಬಂಧಿಸಿದೆ ಹಾಗೂ ಕೃತ್ಯದಲ್ಲಿ ಇನ್ನು ಹಲವರಿದ್ದಾರೆ ಎಂಬ ಶಂಕೆಯಿದ್ದು, ಅವರನ್ನು ಪತ್ತೆಹಚ್ಚಲು ತನಿಖೆ ಮುಂದುವರೆಸಿದೆ.