ಹೈದರಾಬಾದ್, ಮಾ 8 (Daijiworld News/MSP): ದೇಶಾದ್ಯಾಂತ ಸಂಚಲನವನ್ನು ಉಂಟು ಮಾಡಿದ್ದ ಆಂಧ್ರಪ್ರದೇಶದ ಪ್ರಣಯ್ ಮರ್ಯಾದಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ , ಪ್ರಣಯ್ ಪತ್ನಿ ಅಮೃತಾ ಅವರ ತಂದೆ ಮಾರುತಿ ರಾವ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದಲಿತ ಯುವಕನನ್ನು ವಿವಾಹವಾಗಿ, ಪೋಷಕರ ವಿರೋಧದ ನಡುವೆಯೂ ಮನೆಬಿಟ್ಟು ತೆರಳಿದ ಕಾರಣಕ್ಕೆ ಪುತ್ರಿ ಅಮೃತಾ ಹಾಗೂ ಅಳಿಯ ಪ್ರಣಯ್ ಮೇಲೆ ದ್ವೇಷ ಸಾಧಿಸಿಕೊಂಡಿದ್ದ ಅಮೃತ ತಂದೆ ಮಾರುತಿ ರಾವ್ ಕಳೆದ 2 ವರ್ಷಗಳ ಹಿಂದೆ ಸುಪಾರಿ ನೀಡಿ 2018ರ ಸೆ.15 ರಂದು ಐದು ತಿಂಗಳ ಗರ್ಭಿಣಿಯಾಗಿದ್ದ ಅಮೃತ ಪತಿಯೊಂದಿಗೆ ನರ್ಸಿಂಗ್ ಹೋಮ್ಗೆ ಹೋಗಿ ವಾಪಸ್ ಬರುವ ಸಂದರ್ಭದಲ್ಲಿ ಪ್ರಣಯ್ನನ್ನು ಕೊಲೆ ಮಾಡಿಸಿದ್ದರು. ಇದೇ ಆರೋಪದಲ್ಲಿ ಜೈಲು ಪಾಲಾಗಿದ್ದ ಮಾರುತಿ ರಾವ್ ಇತ್ತೀಚೆಗೆ ಜಾಮೀನಿನಲ್ಲಿ ಹೊರಬಂದಿದ್ದರು.
ಜಾಮೀನಿನ ಮೇಲೆ ಹೊರ ಬಂದಿದ್ದ ಆರೋಪಿ ಮಾರುತಿ ರಾವ್ ಹೈದರಾಬಾದ್ನ ಖೈರತಾಬಾದ್ ಆರ್ಯವೈಶ್ಯ ಭವನನಲ್ಲಿ ಕೊಠಡಿಯನ್ನು ಬಾಡಿಗೆಗೆ ಪಡೆದಿದು ಉಳಿದುಕೊಂಡಿದ್ದರು. ಈ ವೇಳೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮಾರುತಿ ರಾವ್ ಪತ್ನಿ ಎಷ್ಟೇ ಬಾರಿ ಫೋನ್ ಕರೆ ಮಾಡಿದರೂ ಸ್ವೀಕರಿಸಿದ ಹಿನ್ನೆಲೆಯಲ್ಲಿ ಸಿಬ್ಬಂದಿಗೆ ಮಾಹಿತಿ ನೀಡಿದ ವೇಳೆ ಘಟನೆ ಬೆಳಕಿಗೆ ಬಂದಿದೆ.