ಇಟಾನಗರ, ಮಾ. 08 (Daijiworld News/MB) : ಕೊರೊನಾ ವೈರಸ್ ಸೋಂಕು ಭಾರತದಲ್ಲಿ ಹರಡುತ್ತಲ್ಲೇ ಇದ್ದು ಸೋಂಕಿತರ ಸಂಖ್ಯೆ 39 ಕ್ಕೆ ಏರಿಕೆಯಾಗಿದೆ. ಇತ್ತ ಸೋಂಕು ತಡೆಗಟ್ಟಲು ಕ್ರಮ ಕೈಗೊಂಡಿರುವ ಅರುಣಾಚಲ ಪ್ರದೇಶ ಸರ್ಕಾರವು ವಿದೇಶಿಯರಿಗೆ ಸಂರಕ್ಷಿತ ಪ್ರದೇಶಗಳ ಪ್ರವೇಶ ಅನುಮತಿ ಪತ್ರ (ಪ್ರೊಟೆಕ್ಟೆಡ್ ಏರಿಯಾ ಪರ್ಮಿಟ್–ಪಿಎಪಿ) ನೀಡುವುದನ್ನು ಭಾನುವಾರದಿಂದ ಸ್ಥಗಿತಗೊಳಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚೀನಾದೊಂದಿಗೆ ಗಡಿ ಹಂಚಿಕೊಂಡಿರುವ ಅರುಣಾಚಲ ಪ್ರದೇಶಕ್ಕೆ ವಿದೇಶಿಗರು ಪ್ರವೇಶಿಸಲು ಪಿಎಪಿ ಪಡೆದುಕೊಳ್ಳಬೇಕು ಎಂಬ ನಿಯಮವಿದೆ.
ಪಿಎಪಿ ವಿತರಣೆ ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಬೇಕು ಎಂದು ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ಅಧಿಕಾರಿಗಳಿಗೆ ಸೂಚಸಿದ್ದಾರೆ.
ಭಾರತಕ್ಕೆ ವಿದೇಶಗಳಿಂದ ಬಂದಿರುವವರಲ್ಲಿಯೇ ಕೊರೊನಾ ವೈರಸ್ ಸೋಂಕು ಪತ್ತೆಯಾಗುತ್ತಿದೆ. ದೇಶದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಪ್ರಮಾಣ ಏರುತ್ತಿದೆ. ಈ ನಿಟ್ಟಿನಲ್ಲಿ ಅರುಣಾಚಲ ಪ್ರದೇಶದಲ್ಲಿ ಸೋಂಕು ಹರಡುವುದನ್ನು ತಡೆಯಲೆಂದು ವಿದೇಶಿಗರಿಗೆ ಪ್ರವೇಶ ಅನುಮತಿ ನಿರಾಕರಿಸಲು ತೀರ್ಮಾನಿಸಲಾಗಿದೆ" ಎಂದು ಸರ್ಕಾರದ ಆದೇಶ ಹೇಳಿದೆ.
ಕೆಲವು ದಿನಗಳ ಹಿಂದೆ ಸಿಕ್ಕಿಂ ರಾಜ್ಯವು ವಿದೇಶಿಗರ ಪ್ರವೇಶಕ್ಕೆ ನಿರ್ಬಂಧ ಹೇರಿತ್ತು. ಭೂತಾನ್ ದೇಶ ಕೂಡಾ ಎರಡು ವಾರಗಳ ಅವಧಿಗೆ ವಿದೇಶಿಗರ ಪ್ರವೇಶವನ್ನು ನಿರ್ಬಂಧಿಸಿತ್ತು.