ಧಾರವಾಡ, ಮಾ. 08 (Daijiworld News/MB) : ಮಹದಾಯಿ ನದಿನೀರು ಹಂಚಿಕೆ ವಿವಾದವನ್ನು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಆರು ತಿಂಗಳಲ್ಲೇ ಬಗೆಹರಿಸಲಾಗಿದೆ. ಕಾಂಗ್ರೆಸ್ನವರಂತೆ ನಾವು ಕೇವಲ ಮಾತಿನಲ್ಲೇ ಕಾಲ ಕಳೆಯಲ್ಲ. ನೀರು ಕುಡಿಸಲ್ಲ ಬದಲಿಗೆ ಕೊಡಿಸುತ್ತೇವೆ ಎಂದು ಸಂಸದ ಪ್ರಹ್ಲಾದ್ ಜೋಶಿ ವ್ಯಂಗ್ಯ ಮಾಡಿದ್ದಾರೆ.
ಭಾನುವಾರ ಧಾರವಾಡ ಜಿಲ್ಲೆ ನವಲಗುಂದ ರೈತ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಮಹದಾಯಿಗಾಗಿ ಹಲವಾರು ರೀತಿಯ ಹೋರಾಟಗಳು ನಡೆದವು. ಯಾವುದೇ ರಾಜಕಾರಣ ನಾವು ಮಾತನಾಡುವುದಿಲ್ಲ. ಆದರೆ ಎಲ್ಲರೂ ವಾಸ್ತವಾಂಶ ತಿಳಿಯಬೇಕು. ಟ್ರಿಬ್ಯುನಲ್ ರಚನೆ ವಿಚಾರ ಮನಮೋಹನ ಸಿಂಗ್ ಪ್ರಧಾನಿಯಾಗಿದ್ದಾಗಲೇ ಬಂದಿತ್ತು. ಆದರೆ ಕಳಸಾ ಬಂಡೂರಿ ಮೋದಿ ಬಂದ ಮೇಲೆಯೇ ಹುಟ್ಟಿದೆ ಎನ್ನುವಂತೆ ಕೆಲವರು ಅಪ್ರಚಾರ ಮಾಡಿದ್ದರು" ಎಂದು ಆಕ್ರೋಶಗೊಂಡರು.
ಅನೇಕ ವರ್ಷಗಳಿಂದ “ನರ್ಮದಾ, ಕಾವೇರಿ,ಕೃಷ್ಣಾ ನದಿ ವಿವಾದಗಳು ನಡೆದಿದೆ. ಆದರೆ ಮೋದಿ ಬಂದ ಬಳಿಕ ಎಲ್ಲಾ ಅಂತಾರಾಜ್ಯ ನದಿ ನೀರು ವ್ಯಾಜ್ಯಗಳನ್ನು ಶೀಘ್ರವೇ ಮುಗಿಸಬೇಕು ಎಂದು ಸಂಕಲ್ಪ ತೊಟ್ಟಿದ್ದರು. ಟ್ರಿಬ್ಯುನಲ್ ಇದ್ದರೂ ಆ ನೀರಿನ ಮೇಲೆ ನಮ್ಮ ಹಕ್ಕಿದೆ ಎಂಬ ವಿಶ್ವಾಸ ನಮಗಿತ್ತು. ಅದಕ್ಕಾಗಿಯೇ ನ್ಯಾಯಾಧೀಕರಣ ಮುಂದುವರೆಯಲು ನಾವು ಬಿಟ್ಟಿಲ್ಲ. ಯಡಿಯೂರಪ್ಪ ಸರ್ಕಾರ ಬಂದ ಬಳಿಕ ನಾವು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದೆವು ಎಂದು ತಿಳಿಸಿದರು.
ಬಿಎಸ್ವೈ ಸರ್ಕಾರ ಅಧಿಸೂಚನೆಗಾಗಿ ಕೋರ್ಟ್ನಲ್ಲಿ ಹೋರಾಟ ನಡೆಸಿತು. ಅದರ ಪ್ರತಿಫಲವಾಗಿ ಅಧಿಸೂಚನೆಯಾಗಿದೆ. ನವಲಗುಂದದಲ್ಲಿ ಕೆಲವರು ಹಸಿರು ಶಾಲು ಹಾಕಿಕೊಂಡು ರಾಜಕಾರಣ ಮಾಡುವವರಿದ್ದಾರೆ. ಕಾಂಗ್ರೆಸ್ ನಾಯಕರು ಮಹದಾಯಿ ಕುರಿತು ಬಾಯಿಗೆ ಬಂದ ಹಾಗೆ ಮಾತನಾಡ್ತಾರೆ, ಜನರಿಗೆ ನೀರು ಕುಡಿಸ್ತಾರೆ. ಆದರೆ ಬಿಜೆಪಿಯವರು ನೀರು ಕುಡಿಸಲ್ಲ, ನೀರು ಕೊಡಿಸುತ್ತೇವೆ" ಎಂದರು.