ಬೆಂಗಳೂರು, ಮಾ.08 (DaijiworldNews/PY) : "ಆರ್ಥಿಕ ವಿಚಾರದ ಬಗ್ಗೆ ಜ್ಞಾನ ಇಲ್ಲದಂಥವರು ನಿರ್ಮಲಾ ಸೀತಾರಾಮನ್. ಅವರು ಹೆಬ್ಬೆಟ್ಟು. ಮೋದಿ, ಅಮಿತ್ ಶಾ ಹೇಳಿದ್ದಕ್ಕೆ ಇವರು ಸಹಿ ಹಾಕುತ್ತಾರೆ. ಯೆಸ್ ಬ್ಯಾಂಕ್ ದಿವಾಳಿಗೆ ಯು.ಪಿ.ಎ ಸರ್ಕಾರ ಕಾರಣವಲ್ಲ. ಆರ್ಥಿಕ ಹಿಂಜರಿತಕ್ಕೆ ಬಿಜೆಪಿ ಕೇಂದ್ರ ಸರ್ಕಾರವೇ ನೇರ ಕಾರಣ" ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
"ಸಿಎಂ ಬಿಎಸ್ವೈ ಅವರ ಕಾರ್ಯವೈಖರಿ ಸರಿಯಿಲ್ಲ. ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯ ಸಂದರ್ಭದಲ್ಲಿ ಆಗುತ್ತಿದ್ದ ಶೇ.10 ಕಾರ್ಯ ಕೂಡಾ ಈಗ ನಡೆಯುತ್ತಿಲ್ಲ. ಬಿಎಸ್ವೈ ಅವರದ್ದು ಕಿಚನ್ ಕ್ಯಾಬಿನೆಟ್. ಸೂಪರ್ ಸಿಎಂ ಈ ಕ್ಯಾಬಿನೆಟ್ನಲ್ಲಿ ಇದ್ದಾರೆ. ಅವರೆಲ್ಲಾ ಯಾವ ರೀತಿಯ ಸಲಹೆ ನೀಡುತ್ತಾರೋ ತಿಳಿದಿಲ್ಲ. ಕೇವಲ ಕಮಿಷನ್ ಹೊಡೆಯುವುದೊಂದೇ ಇವರಿಗೆಲ್ಲಾ ಕೆಲಸವಾಗಿದೆ" ಎಂದರು.
"ಈಗ ಸಿಎಂ ಬಿಎಸ್ವೈ ಅವರು ವಿಪಕ್ಷ ಸ್ಥಾನದಲ್ಲಿಲ್ಲ. ಅವರು ಮುಖ್ಯಮಂತ್ರಿ. ತಮಗೆ ಇಷ್ಟಬಂದಂತೆ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ" ಎಂದು ತಿಳಿಸಿದರು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ವಿರುದ್ದವೂ ಆಕ್ರೋಶಗೊಂಡ ಗುಂಡೂರಾವ್ ಅವರು, "ನಿರ್ಮಲಾ ಸೀತಾರಾಮನ್ ಅವರು ಆರ್ಥಿಕ ವಿಚಾರದ ಬಗ್ಗೆ ಜ್ಞಾನ ಇಲ್ಲದಂಥವರು. ಅವರು ಹೆಬ್ಬೆಟ್ಟು. ಪ್ರಧಾನಿ ಮೋದಿ, ಅಮಿತ್ ಶಾ ಹೇಳಿದ್ದಕ್ಕೆ ಇವರು ಸಹಿ ಮಾಡುತ್ತಾರೆ. ಯೆಸ್ ಬ್ಯಾಂಕ್ ದಿವಾಳಿಯಾಗಲು ಯು.ಪಿ.ಎ ಸರ್ಕಾರ ಕಾರಣವಲ್ಲ. ಬಿಜೆಪಿ ಕೇಂದ್ರ ಸರ್ಕಾರ ಆರ್ಥಿಕ ಹಿಂಜರಿತಕ್ಕೆ ನೇರ ಕಾರಣ" ಎಂದರು.
ದಿನೇಶ್ ಗುಂಡೂರಾವ್ ಅವರು ಕರ್ನಾಟಕ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತ ಬಳಿಕ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಇಲ್ಲಿಯವರೆಗೆ ಅವರ ರಾಜೀನಾಮೆ ಸ್ವೀಕಾರವಾಗಿಲ್ಲ. ಈ ವಿಚಾರವಾಗಿ ಮಾತನಾಡಿದ ಅವರು, "ಕೆಪಿಸಿಸಿ ಅಧ್ಯಕ್ಷರ ಬಗ್ಗೆ ಬೇಗ ನಿರ್ಧಾರವಾಗಬೇಕಿದೆ. ಹೈಕಮಾಂಡ್ ತೀರ್ಮಾನ ಪಕ್ಷದ ಸಂಘಟನೆಗೆ ಸೂಕ್ತವಾಗಿರಬೇಕು. ಕೇಂದ್ರ, ರಾಜ್ಯ ಸರ್ಕಾರದ ಬಹಳಷ್ಟು ಸಮಸ್ಯೆಗಳಿವೆ. ಪಕ್ಷದ ವತಿಯಿಂದ ನಾವು ಅವುಗಳ ವಿರುದ್ಧ ಹೋರಾಡಬೇಕಿದೆ. ಹಾಗಾಗಿ, ಈ ಅನಿಶ್ಚಿತತೆ ಬೇಗ ಬಗೆಹರಿಯಬೇಕಿದೆ" ಎಂದು ಹೇಳಿದರು.