ನವದೆಹಲಿ, ಮಾ.08 (DaijiworldNews/PY): ದೇಶದಲ್ಲಿ ಆತ್ಮಾಹುತಿ ದಾಳಿಗೆ ಸಂಚು ನಡೆಸಿದ್ದ ಶಂಕಿತ ಐಸಿಸ್ ಉಗ್ರ ದಂಪತಿಯನ್ನು ದೆಹಲಿ ಪೊಲೀಸರ ವಿಶೇಷ ದಳದ ಅಧಿಕಾರಿಗಳು ಬಂಧಿಸಿದ್ದಾರೆ.
ದೆಹಲಿಯಲ್ಲಿರುವ ಓಕ್ಲಾ ಪ್ರದೇಶದಿಂದ ಇವರಿಬ್ಬರನ್ನು ಬಂಧಿಸಲಾಗಿದ್ದು, ಬಂಧಿತರನ್ನು ಜಹನ್ ಝೆಬ್ ಸಮಿ ಹಾಗೂ ಆತನ ಪತ್ನಿ ಹಿಂಡಾ ಬಶೀರ್ ಬೇಗ್ ಎಂದು ಗುರುತಿಸಲಾಗಿದೆ.
ಬಂಧಿತರು ಅಫ್ಘಾನಿಸ್ಥಾನದಲ್ಲಿದ್ದ ಐ.ಎಸ್.ಕೆ.ಪಿ. (ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಲೆವಂಟ್-ಖೊರಾಸಮ್) ಸಂಘಟನೆಯ ಹಲವು ಪ್ರಮುಖರೊಂದಿಗೆ ಸಂಪರ್ಕದಲ್ಲಿದ್ದರು ಎಂಬ ಮಾಹಿತಿಯನ್ನು ಪೊಲೀಸರು ತಿಳಿಸಿದ್ದಾರೆ.
ಅಲ್ಲದೇ, ಉಗ್ರದಾಳಿಗೆ ಸಂಚನ್ನು ರೂಪಿಸಲು ದೆಹಲಿಯ ವಿವಿಧ ಕಡೆಗಳಲ್ಲಿ ಮುಸ್ಲಿಂ ಯುವಕರನ್ನು ಪ್ರಚೋದಿಸುತ್ತಿದ್ದರು ಎಂಬ ಆಘಾತಕಾರಿ ಮಾಹಿತಿಯನ್ನು ಕೂಡಾ ಪೊಲೀಸರು ತಿಳಿಸಿದ್ದಾರೆ.
ಬಂಧಿತರಿಂದ ಉಗ್ರ ಕೃತ್ಯಕ್ಕೆ ಪ್ರೇರಣೆ ನೀಡಿದ ಹಲವಾರು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇಂಡಿಯನ್ ಮುಸ್ಲಿಂ ಯನೈಟ್ ಎಂಬ ಹೆಸರಿನ ಫೇಸ್ಬುಕ್ ಪುಟವೊಂದನ್ನೂ ಈ ದಂಪತಿಗಳು ನಡೆಸುತ್ತಿದ್ದರು ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ, ಎನ್.ಆರ್.ಸಿ. ಹಾಗೂ ಎನ್.ಪಿ.ಎ ವಿರುದ್ದ ಈ ಸಾಮಾಜಿಕ ಜಾಲತಾಣ ವೇದಿಕೆ ಮೂಲಕ ಅಧಿಕ ಜನರನ್ನು ಒಗ್ಗೂಡಿಸುತ್ತಿದ್ದರು ಎನ್ನುವ ಮಾಹಿತಿಯೂ ಲಭ್ಯವಾಗಿದೆ. ದೆಹಲಿಯ ಉಪ ಪೊಲೀಸ್ ಕಮಿಷನರ್ ಪ್ರಮೋದ್ ಸಿಂಗ್ ಕುಶ್ವಾಹ ಅವರು ಈ ವರದಿಯನ್ನು ಖಚಿತ ಪಡಿಸಿದ್ದಾರೆ.