ದಾವಣಗೆರೆ, ಮಾ.08 (DaijiworldNews/PY) : ಬಿಜೆಪಿಗೆ ಸಿದ್ದರಾಮಯ್ಯ ಸೇರಿದರೆ ಕೇಂದ್ರದ ಸಚಿವರಾಗುತ್ತಾರೆ ಎಂದು ಹೇಳಿರುವ ಬಾಬುರಾವ್ ಚಿಂಚನಸೂರು ಅವರ ಹೇಳಿಕೆ ಮೂರ್ಖತನದ್ದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಯಾವತ್ತೂ ಸಿದ್ದರಾಮಯ್ಯ ಅಧಿಕಾರದ ಹಿಂದೆ ಹೋದವನಲ್ಲ. ಜನರು ಕೊಟ್ಟರೆ ಕೆಲಸ ಮಾಡುತ್ತೇನೆ" ಎಂದರು.
"ಸಿದ್ದರಾಮಯ್ಯ ಕರೆದರೆ ಬಿಜೆಪಿಗೆ ಹೋದವರು ಬರುತ್ತಾರೆ ಎಂದು ಮಾರ್ಗರೇಟ್ ಆಳ್ವಾ ಅವರು ಯಾವ ರೀತಿಯಾಗಿ ಹೇಳಿದ್ದಾರೆ ಗೊತ್ತಿಲ್ಲ. ಯಾವುದೇ ಬೆದರಿಕೆಯಾಗಲಿ ನಾನು ಹಾಕಿಲ್ಲ. ಸಚಿವರಾಗಲು ಹೋದವರು ಪುನಃ ಪಕ್ಷಕ್ಕೆ ಬರುತ್ತಾರೆ. ನಾನೇ ಭೈರತಿ ಬಸವರಾಜ್ ಅವರಿಗೆ ಟಿಕೆಟ್ ಕೊಡಿಸಿ ಗೆಲ್ಲಿಸಿದೆ. ಈಗ ವಾಪಾಸ್ ಬರುತ್ತಾರಾ. ರಾಜಕೀಯ ಸಿದ್ದಾಂತಗಳು ಇರುತ್ತಿದ್ದರೆ ಎಲ್ಲಿಗೂ ಹೋಗುತ್ತಿರಲಿಲ್ಲ. ಅವರು ಯಾವುದೇ ಕಾರಣಕ್ಕೂ ವಾಪಾಸ್ ಬರುವುದಿಲ್ಲ. ಅವರೆಲ್ಲರೂ ಅವಕಾಶವಾದಿಗಳು" ಎಂದು ಹೇಳಿದರು.