National
ಸಾರ್ವಜನಿಕರು ಸಪ್ತಪದಿ ಸರಳ ಸಾಮೂಹಿಕ ವಿವಾಹ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು: ಸಚಿವ ಕೋಟ
- Mon, Mar 09 2020 10:24:24 AM
-
ಧಾರವಾಡ, ಮಾ 9 (Daijiworld News/MSP): ಕರ್ನಾಟಕ ಸರ್ಕಾರವು ಮುಜರಾಯಿ ಇಲಾಖೆಯ ಧಾರ್ಮಿಕ ದತ್ತಿ ಇಲಾಖೆಯಿಂದ ಬಡತನ ರೇಖೆ ಕೆಳಗಿರುವ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಮತ್ತು ಸಾಮೂಹಿಕ ವಿವಾಹದಲ್ಲಿ ಆಸಕ್ತಿಯಿರುವ ಕುಟುಂಬಗಳ ಸಹಾಯಕ್ಕಾಗಿ ಸಪ್ತಪದಿ ಸರಳ ಸಾಮೂಹಿಕ ವಿವಾಹ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮುಜರಾಯಿ, ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಇಂದು ಮಧ್ಯಾಹ್ನ ಡಾ.ಮಲ್ಲಿಕಾರ್ಜುನ ಮನಸೂರ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ "ಸಪ್ತಪದಿ" ಸರಳ ಸಾಮೂಹಿಕ ವಿವಾಹದ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ, ಮಾತನಾಡಿದರು.
ಬಡತನದಲ್ಲಿರುವ ಕುಟುಂಬವು ಒಂದು ವಿವಾಹವನ್ನು ಮಾಡುವಾಗ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ತೊಂದರೆಗೆ ಇಡಾಗುತ್ತದೆ. ಹೀಗಾಗಿ ಸರ್ಕಾರದ ಯೋಜನೆಯಾದ ಸಪ್ತಪದಿ ಸರಳ ಸಾಮೂಹಿಕ ವಿವಾಹದ ಮೂಲಕ ಬಡಜನರಿಗೆ ಅನುಕೂಲವಾಗಲಿದೆ
ಸರಳ ಸಾಮೂಹಿಕ ವಿವಾಹವಾಗುವ ವಧುವಿಗೆ ಧಾರೆ ಸೀರೆಗೆಂದು 10 ಸಾವಿರ ರೂ. ಹಾಗೂ 8 ಗ್ರಾಂ. ಚಿನ್ನದ ಮಾಂಗಲ್ಯವನ್ನು ಮತ್ತು ವರನಿಗೆ 5 ಸಾವಿರ ರೂ. ಸೇರಿದಂತೆ ಒಂದು ಜೋಡಿ ವಧು-ವರನಿಗೆ ಒಟ್ಟು 55 ಸಾವಿರ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ. ವಿವಾಹಕ್ಕೆ ಬರುವಂತಹ ವಧು-ವರರ ಬಂಧುಗಳಿಗೆ ಊಟೋಪಚಾರದ ವ್ಯವಸ್ಥೆಯನ್ನು ಸಂಬಂಧಿಸಿದ ದೇವಾಲಯದ ನಿಧಿಯಿಂದ ಮಾಡಲಾಗುತ್ತದೆ ಎಂದು ಅವರು ಹೇಳಿದರು.
ಧಾರವಾಡ ಜಿಲ್ಲೆಯ 5 ಸ್ಥಳಗಳಲ್ಲಿ ಸಪ್ತಪದಿ ಸರಳ ಸಾಮೂಹಿಕ ವಿವಾಹಗಳು ನಡೆಯುತ್ತವೆ. ಧಾರವಾಡದ ಸೋಮೇಶ್ವರ ದೇವಾಲಯ, ಹುಬ್ಬಳ್ಳಿಯ ಸಿದ್ಧಾರೂಢ ಮಠ, ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದ ಮಾರುತಿ ದೇವಸ್ಥಾನ, ಅಣ್ಣಿಗೇರಿಯ ಅಮೃತೇಶ್ವರ ದೇವಸ್ಥಾನ ಹಾಗೂ ಕಲಘಟಗಿಯ ಗ್ರಾಮದೇವತೆ ದೇವಸ್ಥಾನದಲ್ಲಿ ಸಪ್ತಪದಿ ಸರಳ ಸಾಮೂಹಿಕ ವಿವಾಹಗಳು ನಡೆಯಲಿವೆ.
ಸಪ್ತಪದಿ ಸರಳ ಸಾಮೂಹಿಕ ವಿವಾಹಗಳು ಏಪ್ರಿಲ್ 26 ರ ಅಕ್ಷಯ ತೃತೀಯ ಮೂಹೂರ್ತದಲ್ಲಿ ಮತ್ತು ಮೇ 24 ರಂದು ಎರಡು ಹಂತದಲ್ಲಿ ನಡೆಯಲಿವೆ. ಮೊದಲ ಹಂತದ ಏಪ್ರೀಲ್ 26 ರಂದು ಸಪ್ತಪದಿ ಸರಳ ಸಾಮೂಹಿಕ ವಿವಾಹವಾಗ ಬಯಸುವವರು ಸಂಬಂಧಿಸಿದ ತಾಲೂಕಿನ ತಹಶೀಲ್ದಾರ ಕಚೇರಿಗಳಲ್ಲಿ ಮಾರ್ಚ್ 27 ರೊಳಗಾಗಿ ಅರ್ಜಿ ಸಲ್ಲಿಸಿ ತಮ್ಮ ಹೆಸರು ನೊಂದಾಯಿಸಿಕೊಳ್ಳಬೇಕು ಎಂದು ಸಚಿವರು ತಿಳಿಸಿದರು.
ಸಪ್ತಪದಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ರಾಜ್ಯದ ವಿಧಾನಸಭೆಯ ಹಾಗೂ ವಿಧಾನ ಪರಿಷತ್ ಶಾಸಕರು, ಲೋಕಸಭಾ ಸದಸ್ಯರು ಭಾಗವಹಿಸಲು ಇಲಾಖೆಯಿಂದ ಕೋರಲಾಗಿದೆ. ಅನೇಕ ಧರ್ಮಗುರುಗಳು, ಮಠಾಧೀಶರು ಸಪ್ತಪದಿ ಸರಳ ವಿವಾಹಕ್ಕೆ ಪ್ರೋತ್ಸಾತ್ಸಾಹ ನೀಡಿದ್ದಾರೆ ಹಾಗೂ ಏಪ್ರಿಲ್ 26 ರಂದು ನಡೆಯುವ ಸರಳ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡು ಈ ಯೋಜನೆಯನ್ನು ಯಶಸ್ವಿಗೊಳಿಸುವ ಮೂಲಕ ಸಮಾಜದಲ್ಲಿ ಹೊಸದೊದು ಬದುಕಿಗೆ ಅಡಿಯಾಗಬೇಕು ಎಂದು ತಿಳಿಸಿದರು.
ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದಲು ಮತ್ತು ಗಣಿ ಸಚಿವ ಪ್ರಲ್ಹಾದ ಜೋಶಿ ಅವರು ಮಾರ್ಗಸೂಚಿಯ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿ, ವಿಶ್ವದಾದ್ಯಂತ ವಿವಿಧ ರಾಷ್ಟ್ರಗಳಲ್ಲಿ ಕುಟುಂಬ ಕಲ್ಪನೆ ವಿನಾಶದತ್ತ ಸಾಗಿದೆ. ಏಕಾಂಗಿ ಜೀವನ, ಕೌಟುಂಬಿಕ ಬಿಕ್ಕಟ್ಟು ಹೆಚ್ಚಾಗಿ ಮಾನಸಿಕ ಅಶಾಂತಿ, ಅಪರಾಧ ಕೃತ್ಯಗಳಿಗೆ ಕಾರಣವಾಗುತ್ತಿದೆ. ಆದರೆ ಭಾರತದಲ್ಲಿ ಕುಟುಂಬ ವ್ಯವಸ್ಥೆಯು ಪವಿತ್ರವಾಗಿದ್ದು, ವಿವಾಹ ಸಂಸ್ಕಾರದ ಮೂಲಕ ಸತಿ-ಪತಿಯ ಪಾವಿತ್ರ್ಯವನ್ನು ಎತ್ತಿ ಹಿಡಿದಿದೆ. ಕುಟುಂಬ, ವಿವಾಹ, ಸಂಸ್ಕಾರಗಳಿಗೆ ಭಾರತದಲ್ಲಿ ಅತ್ಯಂತ ಗೌರವ, ಸಂಸ್ಕೃತಿ ಹಿನ್ನೆಲೆಯಿದೆ. ಸರ್ಕಾರ ಸಪ್ತಪದಿ ಸರಳ ಸಾಮೂಹಿಕ ವಿವಾಹದ ಮೂಲಕ ಅದರ ಮಹತ್ವವನ್ನು ಹೆಚ್ಚಿಸುತ್ತಿದೆ. ಮತ್ತು ಬಡವರಿಗೆ, ಅಸಹಾಯಕರಿಗೆ ಹಾಗೂ ಆಸಕ್ತರಿಗೆ ಈ ಯೋಜನೆ ಮೂಲಕ ನೆರವಾಗುತ್ತಿದೆ ಎಂದು ಹೇಳಿದರು. ಶಾಸಕ ಅರವಿಂದ ಬೆಲ್ಲದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಪ್ತಪದಿ ಸರಳ ಸಾಮೂಹಿಕ ವಿವಾಹ ಅತ್ಯಂತ ಮಹತ್ವದ ಯೋಜನೆಯಾಗಿದ್ದು, ಇದರಲ್ಲಿ ಪಾಲ್ಗೊಳ್ಳುವ ಕುಟುಂಬ ಹಾಗೂ ವಧು-ವರರು ಜೀವನ ಪೂರ್ತಿ ಈ ಕಾರ್ಯವನ್ನು ನೆನೆಯುತ್ತಾರೆ. ಜಿಲ್ಲಾಡಳಿತ ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳು ಈ ಪುಣ್ಯದ ಕಾರ್ಯದಲ್ಲಿ ಮನಃಪೂರ್ವಕವಾಗಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಹೇಳಿದರು.
ವೇದಿಕೆಯಲ್ಲಿ ಶಾಸಕರಾದ ಅಮೃತ ದೇಸಾಯಿ, ಸಿ.ಎಂ. ನಿಂಬಣ್ಣವರ, ಮಾಜಿ ಶಾಸಕಿ ಸೀಮಾ ಮಸೂತಿ, ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ ಕಲಬುರಗಿ, ಜಿಲ್ಲಾ ಪಂಚಾಯತ ಸ್ಥಾಯಿ ಸಮಿತಿ ಅಧ್ಯಕ್ಷ ಕಲ್ಲಪ್ಪ ಪುಡಕಲಕಟ್ಟಿ, ಜಿಲ್ಲಾ ಪಂಚಾಯತ ಸದಸ್ಯರಾದ ನಾಗನಗೌಡ ಪಾಟೀಲ, ಚನ್ನಬಸಪ್ಪ ಮಟ್ಟಿ, ತಾಲೂಕು ಪಂಚಾಯತ ಅಧ್ಯಕ್ಷ ಈರಪ್ಪ ಏಣಗಿ, ಜಿಲ್ಲಾ ಪಂಚಾಯತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಬಿ.ಸಿ. ಸತೀಶ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಪ್ತಪದಿ ಸರಳ ಸಾಮೂಹಿಕ ವಿವಾಹದ ಕುರಿತು ಡಾ.ಶಶಿಧರ್ ನರೇಂದ್ರ ವಿಶೇಷ ಉಪನ್ಯಾಸ ನೀಡಿದರು. ಜಿಲ್ಲಾಧಿಕಾರಿ ದೀಪಾ ಚೋಳನ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಆರತಿ ದೇವಶಿಖಾಮಣಿ ಕಾರ್ಯಕ್ರಮ ನಿರೂಪಿಸಿದರು. ಉಪವಿಭಾಗಾಧಿಕಾರಿ ಮಹ್ಮದ ಜುಬೇರ ವಂದಿಸಿದರು.
ಕಾರ್ಯಕ್ರಮ ಪೂರ್ವದಲ್ಲಿ ಮುಜರಾಯಿ, ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಸಪ್ತಪದಿ ಸರಳ ಸಾಮೂಹಿಕ ವಿವಾಹದ ಜನಜಾಗೃತಿಗಾಗಿ ರೂಪಿಸಿದ ಸಪ್ತಪದಿ ರಥಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಎಸ್.ಜಿ ಕೊರವರ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಸದಾಶಿವ ಮರ್ಜಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಅಜ್ಜಪ್ಪ ಸೊಗಲದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಭಾರತಿ ಶೆಟ್ಟರ, ತಹಶೀಲ್ದಾರ ಸಂತೋಷ ಬಿರಾದಾರ, ಪ್ರಕಾಶ ನಾಶಿ, ಶಶಿಧರ ಮಾಡ್ಯಾಳ, ಬಸವರಾಜ ಮೆಳವಂಕಿ, ಪಮ್ಮಾರ, ಧಾರ್ಮಿಕ ದತ್ತಿ ಇಲಾಖೆಯ ಜಿಲ್ಲಾ ಅಧೀಕ್ಷಕ ಡಿ.ಎನ್. ಜಾಧವ್ ಸೇರಿದಂತೆ ವಿವಿಧ ಅಧಿಕಾರಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಲೆಕ್ಕಾಧಿಕಾರಿಗಳು ಭಾಗವಹಿಸಿದ್ದರು.