ಪಾಟ್ನಾ, ಮಾ.09 (DaijiworldNews/PY) : ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸಂಯುಕ್ತ ಜನತಾದಳದ ಮಾಜಿ ಎಂಎಲ್ಸಿ ವಿನೋಧ್ ಚೌಧರಿ ಅವರ ಪುತ್ರಿ ಪುಷ್ಪಂ ಪ್ರಿಯಾ ಚೌಧರಿ ಅವರು ತಮ್ಮನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿಕೊಳ್ಳುವ ಮುಖಾಂತರ ಬಿಹಾರ ರಾಜ್ಯ ರಾಜಕಾರಣದಲ್ಲಿ ಆಶ್ಚರ್ಯ ಮೂಡಿಸಿದ್ಧಾರೆ.
ಪ್ರಿಯಾ ಚೌಧರಿ ಅವರು ಬಿಹಾರದ ದರ್ಭಂಗ ಮೂಲದವರಾಗಿದ್ದಾರೆ. ಹಲವು ವರ್ಷಗಳಿಂದ ಲಂಡನ್ನಲ್ಲಿ ವಾಸಿಸುತ್ತಿದ್ದು, ಪೂರ್ಣ ಪುಟದ ಜಾಹೀರಾತಿನಲ್ಲಿ ತಮ್ಮ ಉಮೇದುವಾರಿಕೆಯನ್ನು ಘೋಷಿಸಿದ್ದಾರೆ. ಭಾನುವಾರ ಈ ಜಾಹೀರಾತು ಬಿಹಾರದ ಹಲವಾರು ಹಿಂದಿ ಹಾಗೂ ಇಂಗ್ಲಿಷ್ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.
ಪ್ರಿಯಾ ಚೌಧರಿ ಅವರ ಹೆಸರನ್ನು ಈ ಜಾಹೀರಾತಿನಲ್ಲಿ ಬಿಹಾರ ಸಂಯುಕ್ತ ಜನತಾ ದಳದ ಅಧ್ಯಕ್ಷೆ ಹಾಗೂ ಬಿಹಾರದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಉಲ್ಲೇಖಿಸಲಾಗಿದೆ.
ಪ್ರಸ್ತುತ ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನೇತೃತ್ವದ ಬಿಜೆಪಿ-ಜೆಡಿಯು-ಎಲ್ಜೆಪಿ ಒಕ್ಕೂಟ ಆಡಳಿತ ನಡೆಸುತ್ತಿದೆ.