ನವದೆಹಲಿ, ಮಾ.09 (DaijiworldNews/PY) : ಮಹಾಮಾರಿ ಕೊರೊನಾ ವೈರಸ್ನ ಭೀತಿ ವಿಶ್ವದಾತ್ಯಂತ ಹೆಚ್ಚಾಗಿದ್ದು, ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರ ಬಾಂಗ್ಲಾದೇಶದ ಪ್ರವಾಸವನ್ನು ರದ್ದು ಪಡಿಸಲಾಗಿದೆ ಎಂದು ಪ್ರಧಾನಿ ಸಚಿವಾಲಯ ತಿಳಿಸಿದೆ.
ಅಂದುಕೊಂಡಂತೆ ಎಲ್ಲವೂ ನಡೆದಿದ್ದರೆ, ಬಾಂಗ್ಲಾದೇಶದ ಪ್ರಧಾನಿ ಶೇಕ್ ಹಸೀನಾ ಜೊತೆ ಪ್ರಧಾನಿ ಮೋದಿ ಅವರು ದ್ವಿಪಕ್ಷೀಯ ಮಾತುಕತೆಗಾಗಿ ಇಂದು ಬಾಂಗ್ಲಾದೇಶಕ್ಕೆ ತೆರಳಬೇಕಿತ್ತು. ಅಲ್ಲದೇ, ವಿವಿಧ 7 ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಿತ್ತು. ಆದರೆ, ಮಹಾಮಾರಿ ಕೊರೊನಾ ವೈರಸ್ನ ಭೀತಿ ಎಲ್ಲಾ ಕಡೆ ಹಬ್ಬಿರುವ ಕಾರಣ ಪ್ರಧಾನಿ ಮೋದಿ ಅವರ ಆರೋಗ್ಯದ ಹಿತದೃಷ್ಟಿಯಿಂದ ಬಾಂಗ್ಲಾದೇಶ ಪ್ರವಾಸವನ್ನು ರದ್ದು ಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿರುವ ಬಾಂಗ್ಲಾದೇಶ ಸರ್ಕಾರ, "ಪ್ರಧಾನಿ ಮೋದಿ ಅವರ ಬಾಂಗ್ಲಾ ಪ್ರವಾಸ ಹಾಗೂ ವಿವಿಧ ಕಾರ್ಯಕ್ರಮಗಳು ಕೊರೊನಾ ವೈರಸ್ ಭೀತಿಯಿಂದಾಗಿ ರದ್ದಾಗಿದ್ದರೂ ಕೂಡಾ ಪ್ರಧಾನಿ ಮೋದಿ ಅವರು ದ್ವಿಪಕ್ಷೀಯ ಮಾತು೯ಕತೆಯಲ್ಲಿ ಪಾಲ್ಗೊಳ್ಳಬಹುದು. ಬಾಂಗ್ಲಾದೇಶದ ಪ್ರಧಾನಿ ಶೇಕ್ ಹಸೀನಾ ಅವರೊಂದಿಗೆ ಎರಡೂ ದೇಶಗಳ ಅಭಿವೃದ್ದಿ ಕುರಿತು ಚರ್ಚಿಸಬಹುದು ಎಂದು ನಂಬಿದ್ದೇವೆ. ಈ ಬಗ್ಗೆ ಭಾರತ ಸರ್ಕಾರ ಜೊತೆಗೆ ಮಂಗಳವಾರ ಮಾತುಕತೆ ನಡೆಸಲಾಗುವುದು" ಎಂದು ಬಾಂಗ್ಲಾದೇಶದ ಪ್ರಧಾನಿ ಸಚಿವಾಲಯ ತಿಳಿಸಿದೆ.