ಬೆಂಗಳೂರು, ಮಾ.09 (DaijiworldNews/PY) : ಕೇಂದ್ರ ಸರ್ಕಾರವು ಬಿಸಿಯೂಟ ನೌಕರರಿಗೆ ನೀಡುವ ಸಂಭಾವನೆಯ ಪ್ರಮಾಣವನ್ನು ಹೆಚ್ಚಿಸಬೇಕೆಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ಧಾರೆ.
ಈ ವಿಚಾರವಾಗಿ ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಕ್ರಿಯಾಲ್ ಅವರಿಗೆ ಪತ್ರ ಬರೆದಿರುವ ಸಚಿವರು, ಕೇಂದ್ರ ಸರ್ಕಾರ 2010ರಲ್ಲಿ ಈ ಯೋಜನೆಯಡಿ ಕೆಲಸ ಮಾಡುವ ಅಡುಗೆ ಸಿಬ್ಬಂದಿಗೆ ಮಾಸಿಕ 1000ರೂ. ಸಂಭಾವನೆ ನಿಗದಿಪಡಿಸಿ ಅದರಲ್ಲಿ ಶೇ.75ರಷ್ಟು ಭಾಗ ನೀಡುತ್ತಿತ್ತು. 25ರಷ್ಟು ಭಾಗ ರಾಜ್ಯ ಸರ್ಕಾರ ನೀಡಬೇಕಿತ್ತು. ಕೇಂದ್ರವು ತನ್ನ ಪಾಲನ್ನು 2014ರಲ್ಲಿ ಇದ್ದಕ್ಕಿದ್ದಂತೆ ಶೇ.60ಕ್ಕೆ ಇಳಿಸಿತು. ಶೇ.40ರಷ್ಟು ರಾಜ್ಯ ಸರ್ಕಾರ ನೀಡಬೇಕಾಯಿತು. ಆದರೆ, ರಾಜ್ಯ ಸರ್ಕಾರ ಅಡುಗೆ ಸಿಬ್ಬಂದಿಯ ಸಂಕಷ್ಟವನ್ನು ಆಯಾ ಕಾಲದ ಜೀವನವೆಚ್ಚ ಪರಿಗಣಿಸಿ ಅಡುಗೆಯವರಿಗೆ ಮಾಸಿಕ 2700 ರೂ. ಹಾಗೂ ಸಹಾಯಕರಿಗೆ 2600ರೂ.ಗಳಿಗೆ ಹೆಚ್ಚಿಸಿತು. ಆದರೆ, ಅಂದಿನಿಂದಲೂ ಕೇಂದ್ರ ಸರ್ಕಾರ ತನ್ನ ಪಾಲಿನಿಂದ ಕೇವಲ 600ರೂ.ಗಳನ್ನು ಮಾತ್ರವೇ ನೀಡುತ್ತಿದೆ ಎಂದು ಸಚಿವರು ಪತ್ರದ ಮೂಲಕ ತಿಳಿಸಿದ್ಧಾರೆ.
ಪ್ರಸ್ತುತ ರಾಜ್ಯದಲ್ಲಿ ಮಧ್ಯಾಹ್ನ ಉಪಹಾರ ಯೋಜನೆಯಡಿ 46768 ಅಡುಗೆಯವರು ಹಾಗೂ 71159 ಸಹಾಯಕರು ಸೇರಿ ಒಟ್ಟು 1,17,927 ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಸರ್ಕಾರ ನೀಡುತ್ತಿರುವ ಸಂಭಾವನೆಯಲ್ಲಿ ಜೀವನ ಸಾಗಿಸುವುದಕ್ಕೆ ಕಷ್ಟವಗುವುದರಿಂದ ತಮ್ಮ ವೇತನವನ್ನು ಕ್ರಮವಾಗಿ 6000 ಹಾಗೂ 5000ಕ್ಕೆ ಏರಿಸಬೇಕೆಂದು ಬಿಸಿಯೂಟ ನೌಕರರು ಹಲವು ಬಾರಿ ಕೆಲಸ ಸ್ಥಗಿತ ಮುಷ್ಕರ ಮಾಡುವ ಮುಖಾಂತರ ಒತ್ತಾಯಿಸುತ್ತಿದ್ಧಾರೆ. ಬಿಸಿಯೂಟ ನೌಕರರ ಬೇಡಿಕೆಗಳು ನಿಜಕ್ಕೂ ಸಮ್ಮತವಾಗಿರುವ ಕಾರಣ ಅವರು ಒತ್ತಾಯಮಾಡುತ್ತಿರುವ ಕ್ರಮವಾಗಿ 6000 ಹಾಗೂ 5000 ರೂ.ಗಳಿಗೆ ನಿಗದಿ ಪಡಿಸಿ ಪರಿಷ್ಕೃತ ವೇತನಕ್ಕೆ ಅನುಗುಣವಾಗಿ ಕೇಂದ್ರ ಸರ್ಕಾರದ ಪಾಲನ್ನು ಶೇ.60ರಷ್ಟು ನೀಡಬೇಕೆಂದು ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ.