ಬೆಂಗಳೂರು, ಮಾ 9 (Daijiworld News/MSP): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿಗೆ ಸೇರುತ್ತಾರೆ ಎಂಬ ವದಂತಿ ಹಬ್ಬಿದ್ದು, ಈ ಬಗ್ಗೆ ನು ಬಿಜೆಪಿ ಸೇರುತ್ತೇನೆ ಎಂದು ಹೇಳಿರುವುದು ಮೂರ್ಖತನದ ಹೇಳಿಕೆ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಭೇಟಿ ಹಿನ್ನೆಲೆಯಲ್ಲಿ ರಾಜ್ಯ ರಾಜಕಾರಣದಲ್ಲಿ ಸಿದ್ದರಾಮಯ್ಯ ಬಿಜೆಪಿ ಸೇರಲಿದ್ದಾರೆ ಎಂಬ ವದಂತಿಗಳು ಹಬ್ಬಿತ್ತು.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, " ನಾನು ಬಿಜೆಪಿ ಸೇರುತ್ತೇನೆ ಎಂದು ಹೇಳಿರುವುದು ಮೂರ್ಖತನದ ಹೇಳಿಕೆ. ಕಾನೂನು ವಿದ್ಯಾರ್ಥಿಯಾಗಿ 1972ರಲ್ಲಿ ರಾಜಕೀಯ ಪ್ರವೇಶ ಮಾಡಿದಾಗಿಂದ ಸಾಮಾಜಿಕ ನ್ಯಾಯ, ಸಮಾನತೆ, ಮೀಸಲಾತಿ ವ್ಯವಸ್ಥೆ ಪರ ಹೋರಾಡುತ್ತಾ ಬಂದಿದ್ದೇನೆ, ಬಿಜೆಪಿ ಈ ಎಲ್ಲಾ ತತ್ವಗಳಿಗೂ ವಿರುದ್ಧವಾಗಿದೆ. ಹೀಗಿರುವಾಗ ಬಿಜೆಪಿ ಸೇರಲು ಸಾಧ್ಯವೇ? ಇದೊಂದು ಮೂರ್ಖತನದ ಪ್ರಚಾರ" ಎಂದಿದ್ಧಾರೆ.
ಇನ್ನೊಂದು ಟ್ವಿಟ್ ನಲ್ಲಿ, ಯಾರೇ ಆಗಲಿ ಒಂದು ಸಿದ್ಧಾಂತಕ್ಕೆ ಬದ್ಧವಾಗಿದ್ದಾಗ ಪದೇ ಪದೇ ಪಕ್ಷ ಬದಲಿಸುವಂತಹ ಸನ್ನಿವೇಶವೇ ಉದ್ಭವಿಸುವುದಿಲ್ಲ. ಅವಕಾಶವಾದಿ ರಾಜಕಾರಣಿಗಳು ಮಾತ್ರ ಅಧಿಕಾರ ಹುಡುಕಿಕೊಂಡು ಹೋಗುತ್ತಾರೆ. ಪ್ರಜಾಪ್ರಭುತ್ವದಲ್ಲಿ ಅಧಿಕಾರ ಜನರಿಂದ ನೇರವಾಗಿ ಸಿಗಬೇಕೇ ಹೊರತು ವಾಮಮಾರ್ಗದ ಮೂಲಕ ಅಧಿಕಾರ ಪಡೆಯಲು ಹಪಹಪಿಸಬಾರದು ಎಂದಿದ್ದಾರೆ.
ಬಾದಾಮಿ ಕ್ಷೇತ್ರದಲ್ಲಿ ರೂ.500 ಕೋಟಿ ವೆಚ್ಚದ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಬೇಡಿಕೆ ಇಟ್ಟಿದ್ದೀನಿ. ಯೋಜನೆ ಇನ್ನೂ ಅನುಮೋದನೆಗೊಂಡಿಲ್ಲ, ಆಗಲೇ ಬಿಜೆಪಿಯ ಕೆಲವು ನಾಯಕರು ಬಾದಾಮಿಗೆ ನಾವು ರೂ.650 ಕೋಟಿ ಕೊಟ್ಟಿದ್ದೀವಿ ಅಂತ ಪ್ರಚಾರ ಶುರು ಮಾಡಿಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.