ನವದೆಹಲಿ, ಮಾ 9 (Daijiworld News/MSP): ಆಸ್ಪತ್ರೆಗಳ ಧೂಳಿನ ಕಣಗಳಲ್ಲಿ ಕೂಡಾ ವೈರಸ್ ಪತ್ತೆಯಾಗಿರುವ ಅಂಶ ಬೆಳಕಿಗೆ ಬಂದಿದ್ದು, ಹವಾನಿಯಂತ್ರಣ ವ್ಯವಸ್ಥೆ ಎಸಿಯಿಂದಲೂ ಕೊರೊನಾ ಹರಡುತ್ತದೆ. ಇದು ತೀರಾ ಅಪಾಯಕಾರಿ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಸಿಂಗಾಪುರದ ಆಸ್ಪತ್ರೆಯೊಂದರಲ್ಲಿ ಮೂವರು ಕೊರೊನಾ ಸೋಂಕಿತರಿದ್ದ ಕೊಠಡಿಯ ಗಾಳಿ ಹೊರಹೋಗುವ ಕೊಳವೆಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಅದರಲ್ಲಿಯೂ ವೈರಸ್ ಅಂಶ ಇರುವುದು ಪತ್ತೆಯಾಗಿದೆ.
ಸೆಂಟ್ರಲೈಸ್ಡ್ ಎಸಿ ವ್ಯವಸ್ಥೆ ಇರುವ ಕಡೆ ಕೊರೊನಾ ಸೋಂಕಿತರು ಕೆಮ್ಮಿದಾಗ ಅಥವಾ ಸೀನಿದಾಗ ವೈರಾಣುಯುಕ್ತ ಹನಿಗಳು ಎಸಿಯಲ್ಲಿ ಸೇರಿಕೊಂಡು ಇತರ ಕೊಠಡಿಗಳಿಗೂ ಹರಡುವ ಸಾಧ್ಯತೆಯಿದೆ ಎಂದು ವೈದ್ಯರು ಹೇಳಿದ್ದಾರೆ.
ಹೀಗಾಗಿ ಜಪಾನ್ ಹಾಗೂ ಅಮೆರಿಕಾದಲ್ಲಿ ಕ್ರೂಸ್ ನೌಕೆಯಲ್ಲಿದ್ದ ಅನೇಕರಿಗೆ ಕೊರೊನಾ ಹರಡಲು ಎಸಿಯೇ ಕಾರಣವಾಗಿರಬಹುದು ಎಂದು ಸಿಂಗಾಪುರದ ನ್ಯಾಷನಲ್ ಸೆಂಟರ್ ಫಾರ್ ಇನ್ಫೆಫೆಕ್ಷಿಯಸ್ ಡೀಸಿಸ್ ತಜ್ಞರು ಅಂದಾಜಿಸಿದ್ದಾರೆ.