ಬೆಂಗಳೂರು, ಮಾ. 09 (Daijiworld News/MB) : "ಕೊರೊನಾ ವೈರಸ್ ಭೀತಿ ರಾಜ್ಯದಲ್ಲೂ ಇರುವ ಹಿನ್ನಲೆಯಿಂದಾಗಿ 50 ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರತ್ಯೇಕ ಬೆಡ್ಗಳ ವ್ಯವಸ್ಥೆ ಮಾಡಲಾಗಿದೆ. ಅಗತ್ಯವಾದ ಔಷಧಗಳ ವ್ಯವಸ್ಥೆ ಮಾಡಲಾಗಿದೆ. ಕೊರೊನಾ ಚಿಕಿತ್ಸೆ ಕುರಿತಾಗಿ ವೈದ್ಯರಿಗೂ ತರಬೇತಿ ನೀಡಲಾಗುತ್ತಿದೆ" ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ಈ ಕುರಿತಾಗಿ ವಿಧಾನಸಭೆಯಲ್ಲಿ ಮಾತನಾಡಿದ ಅವರು, "ಕೊರೊನಾ ಸೋಂಕಿನ ಲಕ್ಷಣಗಳು ಇದ್ದಲ್ಲಿ ಮಾತ್ರ ಮಾಸ್ಕ್ ಧರಿಸಿ, ಎಲ್ಲರೂ ಮಾಸ್ಕ್ ಧರಿಸಬೇಕಾಗಿಲ್ಲ. ಪರಸ್ಪರ ಕೈ ಕುಲುಕ ಬೇಡಿ. ಹಾಗೆಯೇ ತುಂಬಾ ಜನರು ಗುಂಪು ಸೇರಿ ಮಾತನಾಡಬೇಡಿ. ಕೊರೊನಾ ಬಗ್ಗೆ ಆತಂಕ ಪಡಬೇಡಿ. ಆದರೆ ಮುಂಜಾಗ್ರತೆ ಕ್ರಮವನ್ನು ಅಗತ್ಯವಾಗಿ ಕೈಗೊಳ್ಳಿ" ಎಂದು ಅವರು ಹೇಳಿದರು.
"6 ತಿಂಗಳಿಗಾಗುವಷ್ಟು ಎನ್-95 ಮಾಸ್ಕ್ಗಳನ್ನು ಸಂಗ್ರಹ ಮಾಡಲಾಗಿದೆ. ಬೆಂಗಳೂರಿನಿಂದ ಹೊರಗೆ ಅಂದರೆ ಹಾಸನ, ಮೈಸೂರು, ಶಿವಮೊಗ್ಗ, ಬೆಳಗಾವಿ, ಮಂಗಳೂರು, ಬಳ್ಳಾರಿಯಲ್ಲಿ ಟೆಸ್ಟ್ ಲ್ಯಾಬ್ ಮಾಡಲಾಗಿದೆ. ಶೀಘ್ರದಲ್ಲಿ ವಲಯವಾರು ನಿರ್ಮಿಸಲಾಗುವುದು" ಎಂದು ತಿಳಿಸಿದರು.
"ಈಗಾಗಲೇ ಬೆಂಗಳೂರಿನ 3 ಜಿಲ್ಲೆಗಳ ಎಲ್ಕೆಜಿ, ಯುಕೆಜಿ ಮಕ್ಕಳಿಗೆ ಒಂದು ತಿಂಗಳು ರಜೆ ನೀಡಿದ್ದೇವೆ. ಚಿಕ್ಕ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಈ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ 5 ವರ್ಷ ಕೆಳಪಟ್ಟ ಮಕ್ಕಳಿಗೆ ರಜೆ ನೀಡಿದ್ದೇವೆ. ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ವೈದ್ಯಕೀಯ ಇಲಾಖೆ ಸಮಕ್ಷಮದಲ್ಲಿ ರಜೆ ಘೋಷಣೆ ಮಾಡಲಾಗಿದೆ. ಈ ಸೋಂಕು ವಿಶ್ವಾದಾದ್ಯಂತ ಆತಂಕ ಉಂಟು ಮಾಡಿದೆ. ಆ ಹಿನ್ನಲೆಯಲ್ಲಿ ನಾವು ಈಗಾಗಲೇ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದೇವೆ" ಎಂದರು.