ಹುಬ್ಬಳ್ಳಿ, ಮಾ 9 (Daijiworld News/MSP): ಹುಬ್ಬಳ್ಳಿಯ ಪ್ರತಿಷಿತ್ ಕೆಎಲ್ ಇ ಕಾಲೇಜಿನಲ್ಲಿ ಪಾಕ್ ಪರ ಘೋಷಣೆ ಹಿನ್ನಲೆಯಲ್ಲಿ ಮೂವರು ಕಾಶ್ಮೀರ ವಿದ್ಯಾರ್ಥಿಗಳ ಜಾಮೀನು ಅರ್ಜಿ ವಜಾಗೊಳಿಸಿ ಹುಬ್ಬಳ್ಳಿಯ 5ನೇ ಅಪರ ಜಿಲ್ಲಾ ನ್ಯಾಯಾಲಯ ಆದೇಶ ಹೊರಡಿಸಿದೆ.
ವಾದ ಪ್ರತಿವಾದವನ್ನು ಆಲಿಸಿದ 5ನೇ ಜೆಎಂಎಫ್ಸಿ ನ್ಯಾಯಾಧೀಶರಾದ ಕೆ.ಎನ್. ಗಂಗಾಧರ ಅವರು ತೀರ್ಪು ಕಾಯ್ದಿರಿಸಿ ಇಂದು ಆದೇಶ ನೀಡಿದ್ದಾರೆ. ಫೆ 15ರಂದು ಕೆಎಲ್ಇ ಕಾಲೇಜಿನಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದ ವಿದ್ಯಾರ್ಥಿಗಳ ಜಾಮೀನಿಗೆ ಸಂಬಂಧಿಸಿದಂತೆ ಬೆಂಗಳೂರಿನ ವಕೀಲರ ತಂಡ ಕಾಶ್ಮೀರ ವಿದ್ಯಾರ್ಥಿಗಳ ಪರ ವಕಾಲತ್ತು ವಹಿಸಿತ್ತು.
ಮಾರ್ಚ್ 5ರಂದು ಕಾಶ್ಮೀರದ ಮೂವರು ವಿದ್ಯಾರ್ಥಿಗಳ ದೇಶದ್ರೋಹಿ ಘೋಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪರ ವಾದ ಮಂಡಿಸಲು ಹುಬ್ಬಳ್ಳಿಯ ವಕೀಲರು ಹಿಂದೇಟು ಹಾಕಿದ್ದರು. ಈ ಹಿನ್ನಲೆಯಲ್ಲಿ ಬೆಂಗಳೂರಿನಿಂದ ಆಗಮಿಸಿದ ವಕೀಲರು ಆರೋಪಿಗಳ ಪರ ವಾದ ಮಂಡನೆ ಮಾಡಿದರು. ಮೈತ್ರೇಯಿ ಕೃಷ್ಣನ್ ನೇತೃತ್ವದ ಹತ್ತು ಜನ ವಕೀಲರ ತಂಡದಿಂದ ವಾದ ಮಂಡನೆ ಮಾಡಿದ್ದರು.
ಇಂದು ಎಲ್ಲ ರೀತಿಯ ಪರಿಶೀಲನೆ ನಡೆಸಿದ ನ್ಯಾಯಾಧೀಶ ಕೆ.ಗಂಗಾಧರ ಅವರು ಕಾಶ್ಮೀರಿ ವಿದ್ಯಾರ್ಥಿಗಳ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದಾರೆ.