ಅಲಹಾಬಾದ್, ಮಾ. 09 (Daijiworld News/MB) : ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟಗಾರರ ಭಾವಚಿತ್ರವಿರುವ ಹೋರ್ಡಿಂಗ್ಗಳನ್ನು ಶೀಘ್ರ ತೆರವುಗೊಳಿಸಬೇಕು ಎಂದು ಉತ್ತರ ಪ್ರದೇಶ ಸರ್ಕಾರಕ್ಕೆ ಅಲಹಾಬಾದ್ ಹೈಕೋರ್ಟ್ ಸೋಮವಾರ ಆದೇಶ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಗೋವಿಂದ್ ಮಾಥುರ್ ಮತ್ತು ನ್ಯಾಯಮೂರ್ತಿ ರಮೇಶ್ ಸಿನ್ಹಾ ಅವರಿದ್ದ ವಿಭಾಗೀಯ ಪೀಠವು, ಆರೋಪಿಗಳ ಭಾವಚಿತ್ರವಿರುವ ಹೋರ್ಡಿಂಗ್ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂಪ್ರೇರಿತ ವಿಚಾರಣೆ ನಡೆಸಿತ್ತು.
ಸರ್ಕಾರದ ಕ್ರಮವನ್ನು ‘ಜನರ ಖಾಸಗಿ ಬದುಕಿನಲ್ಲಿ ಅನಗತ್ಯ ಮಧ್ಯಪ್ರವೇಶ’ ಎಂದು ವ್ಯಾಖ್ಯಾನಿಸಿರುವ ನ್ಯಾಯಪೀಠವು, ಮಾರ್ಚ್ 16ರ ಒಳಗೆ ಎಲ್ಲ ಹೋರ್ಡಿಂಗ್ಗಳನ್ನು ತೆರವುಗೊಳಿಸಬೇಕು ಎಂದು ಲಖನೌ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ.
ಇಲ್ಲಿರುವುದು ವೈಯಕ್ತಿಕ ವಿವರಗಳನ್ನು ಬಹಿರಂಗಗೊಳಿಸಿರುವುದರಿಂದ ಕೆಲವರಿಗೆ ತೊಂದರೆಯಾಗಿದೆ ಎಂಬ ವಿಚಾರ ಮಾತ್ರವಲ್ಲ. ಇಂಥ ಹೋರ್ಡಿಂಗ್ಗಳು ಸಂವಿಧಾನ ಆಶಯವನ್ನೇ ಉಲ್ಲಂಘಿಸುತ್ತವೆ. ಎಲ್ಲ ನಾಗರಿಕರನ್ನು ಸಮಾನವಾಗಿ ಕಾಣಬೇಕಿದ್ದ ಮತ್ತು ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯಬೇಕಿದ್ದ ಸರ್ಕಾರವೇ ಹಾಗೆಯೇ ನಡೆಸಿಕೊಂಡಿಲ್ಲ ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕು" ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.
ವಿಶ್ವಸಂಸ್ಥೆಯು ಖಾಸಗಿತನವನ್ನು ಎಲ್ಲ ಮನುಷ್ಯರ ಮೂಲಭೂತ ಹಕ್ಕು ಎಂದು ಗುರುತಿಸಿದೆ. ನಮ್ಮ ಸಂವಿಧಾನವು ಈ ಬಗ್ಗೆ ನೇರವಾಗಿ ಏನನ್ನೂ ಹೇಳಿಲ್ಲ. ಆದರೆ ಸಂವಿಧಾನದ 21ನೇ ವಿಧಿಯ ಆಶಯವನ್ನು ನ್ಯಾಯಾಲಯಗಳು ಖಾಸಗಿತನದ ಪರವಾಗಿ ವ್ಯಾಖ್ಯಾನಿಸಿವೆ. ಸಂವಿಧಾನದ ಪ್ರಸ್ತಾವನೆಯಲ್ಲಿರುವ ಯಾವುದೇ ಮೌಲ್ಯದ ಬಗ್ಗೆ ಅಗೌರವ ತೋರುವುದನ್ನು ಸಹಿಸಲಾಗುವುದಿಲ್ಲ’ ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದೆ.
ಈ ಪ್ರಕರಣದ ಕುರಿತು ಭಾನುವಾರ ಸ್ವಯಂ ಪ್ರೇರಿತ ವಿಚಾರಣೆ ನಡೆಸಿದ್ದ ಕೋರ್ಟ್ "ಪ್ರತಿಭಟನಕಾರರ ಚಿತ್ರ ಹಾಗೂ ವಿವರಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದ್ದು ಅತಿರೇಕದ ಪರಮಾವಧಿ. ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತಂದ ಕ್ರಮ" ಎಂದು ಟೀಕೆ ಮಾಡಿ ತೀರ್ಪನ್ನು ಸೋಮವಾರಕ್ಕೆ ಕಾಯ್ದಿರಿಸಿತ್ತು.
ಲಖನೌ ಆಡಳಿತವು ಅಳವಡಿಸಿದ್ದ ಹೋರ್ಡಿಂಗ್ಗಳಲ್ಲಿ ಕಾಂಗ್ರೆಸ್ ನಾಯಕ ಸದಾಫ್ ಜಾಫರ್, ರಿಹಾಯ್ ಮಂಚ್ ಸ್ಥಾಪಕ ಮೊಹಮದ್ ಶೋಯೆಬ್, ಷಿಯಾ ಸಮುದಾಯದ ಧಾರ್ಮಿಕ ಮುಖಂಡ ಕಲ್ಬೆ ಸಾದಿಕ್ ಅವರ ಪುತ್ರ ಕಲ್ಬೆ ಸಿಬ್ತೈನ್ ನೂರಿ, ನಿವೃತ್ತ ಐಪಿಎಸ್ ಅಧಿಕಾರಿ ಎಸ್.ಆರ್.ದಾರಾಪುರಿ ಅವರ ಹೆಸರು, ಚಿತ್ರ ಮತ್ತು ವಿವರಗಳಿದ್ದವು.