ಸಿಲಿಗುರಿ, ಮಾ 9 (Daijiworld News/MSP): ಪಶ್ಚಿಮ ಬಂಗಾಳ ಸರ್ಕಾರದ ಆರೋಗ್ಯ ಇಲಾಖೆಯೂ ಫುಲ್ಬಾರಿ ಇಂಟಿಗ್ರೇಟೆಡ್ ಚೆಕ್ ಪೋಸ್ಟ್ (ಐಸಿಪಿ) ನಲ್ಲಿ ತಾತ್ಕಾಲಿಕ ವೈದ್ಯಕೀಯ ಶಿಬಿರವನ್ನು ಸ್ಥಾಪಿಸಿದ್ದು, ದೇಶದಲ್ಲಿ ಕರೋನವೈರಸ್ ಏಕಾಏಕಿ ಹೆಚ್ಚಳವಾದ ಹಿನ್ನಲೆಯಲ್ಲಿ ಚೆಕ್ ಪೋಸ್ಟ್ ನಲ್ಲಿ ಬಾಂಗ್ಲಾದೇಶ, ನೇಪಾಳ ಮತ್ತು ಭೂತಾನ್ ನಿಂದ ಭಾರತಕ್ಕೆ ಪ್ರವೇಶಿಸುವವರನ್ನು ತಪಾಸಣೆಗೆ ಒಳಪಡಿಸಲಿದ್ದಾರೆ.
ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ , ಕೇರಳ ಮತ್ತು ದೆಹಲಿಯಿಂದ ನಾಲ್ಕು ಹೊಸ ಪ್ರಕರಣಗಳು ವರದಿಯಾದ ನಂತರ ಸೋಮವಾರ ಒಟ್ಟು ದೇಶದಾದ್ಯಂತ ಕೊರೊನಾವೈರಸ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ 43 ಕ್ಕೆ ಏರಿದೆ.
"ನಾವು ಬಾಂಗ್ಲಾದೇಶದಿಂದ ಬರುವ ಎಲ್ಲ ಜನರನ್ನು, ಟ್ರಕ್ ಚಾಲಕರು, ಎಲ್ಲರನ್ನೂ ಪರೀಕ್ಷಿಸುತ್ತಿದ್ದೇವೆ" ಎಂದು ಡಾ. ತನ್ಮೋಯ್ ನಾಸ್ಕರ್ ಹೇಳಿದ್ದಾರೆ.. "ಹೊಸ ಪ್ರಕರಣಗಳಲ್ಲಿ ದೆಹಲಿಯಿಂದ ಇಟಲಿಯ ಪ್ರಯಾಣದ ಇತಿಹಾಸವಿದೆ, ಒಬ್ಬರು ಜಮ್ಮುವಿನವರಾಗಿದ್ದು ಇರಾನ್ನ್ ಪ್ರಯಾಣದ ಇತಿಹಾಸವನ್ನು ಹೊಂದಿದ್ದಾರೆ, ಆಗ್ರಾದಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದ ಆರು ಜನರಿಂದ ಸೋಂಕಿಗೆ ಒಳಗಾದವರಲ್ಲಿ ಉತ್ತರ ಪ್ರದೇಶದ ಮೀರತ್ನವರು ಸೇರಿದ್ದಾರೆ. ಕೊರೋನಾ ರೋಗಿಯ ಸಂಪರ್ಕದಿಂದ ಉತ್ತರ ಪ್ರದೇಶದ ಓರ್ವನಿಗೆ ಸೋಂಕು ತಗುಲಿದೆ "ಎಂದು ಕೇಂದ್ರ ಆರೋಗ್ಯ ಸಚಿವಾಲಯದ ವಿಶೇಷ ಕಾರ್ಯದರ್ಶಿ ಸಂಜೀವ ಕುಮಾರ್ ಹೇಳಿದರು.
ಇನ್ನು ಪಶ್ಚಿಮ ಬಂಗಾಳದ ಮುರ್ಷಿದಾಬಾದ್ನ ರೋಗಿಯು ಪರೀಕ್ಶೆ ವೇಳೆ ಕೊರೊನಾ ನೆಗೆಟಿವ್ ಬಂದಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಭಾರತದಲ್ಲಿ ಕೊರೊನಾ ಸೋಂಕಿನ ಕಾರಣದಿಂದಾಗಿ ಇಲ್ಲಿಯವರೆಗೆ ಯಾವುದೇ ಸಾವು ಸಂಭವಿಸಿಲ್ಲ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು.