ಬೆಂಗಳೂರು, ಮಾ. 09 (Daijiworld News/MB) : "ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹತ್ಯೆಗೆ ಸಂಚು ರೂಪಿಸಿದ ಖಂಡನೀಯ. ಇಂತಹ ಕಿಡಿಗೇಡಿಗಳ ವಿರುದ್ಧ ಕೇಂದ್ರ ಸರ್ಕಾರ ಶೀಘ್ರದಲ್ಲೇ ಕ್ರಮ ಕೈಗೊಳ್ಳುತ್ತದೆ" ಎಂದು ಕೇಂದ್ರ ಸಚಿವ ಡಿ.ವಿ ಸಂದಾನಂದ ಗೌಡ ತಿಳಿಸಿದ್ದಾರೆ.
ಈ ಕುರಿತಾಗಿ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಈ ಹತ್ಯೆ ಸಂಚು ವಿಚಾರ ಸತ್ಯವೂ ಆಗಿರಬಹುದು, ಸುಳ್ಳು ಆಗಿರಬಹುದು. ಆದರೆ ಇಂತಹ ಹತ್ಯೆಗಳಿಗೆ ಅವಕಾಶ ನೀಡದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಿದೆ" ಎಂದರು.
ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ಮಾಹಿತಿ ಕೇಂದ್ರ ಗುಪ್ತದಳದ ಅಧಿಕಾರಿಗಳಿಂದಲೇ ತಿಳಿದು ಬಂದಿದೆ. ಈ ಎಚ್ಚರಿಕೆ ಮಾಹಿತಿಯನ್ನು ಈಗಾಗಲೇ ಕೇಂದ್ರ ಗುಪ್ತದಳದ ಅಧಿಕಾರಿಗಳು ರಾಜ್ಯ ಪೊಲೀಸರಿಗೆ ರವಾನೆ ಮಾಡಿದ್ದಾರೆ.
ಕೇಂದ್ರ ಗುಪ್ತದಳ ಇಲಾಖೆ, ಭಾನುವಾರ ನಗರದ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆರ್ಎಸ್ಎಸ್ ಕಾರ್ಯಕರ್ತರ ಸಮಾವೇಶ ಕಾರ್ಯಕ್ರಮದ ಮೇಲೆ ಉಗ್ರರು ಕಣ್ಣಿಟ್ಟಿದ್ದರು ಎಂದು ಪೊಲೀಸರಿಗೆ ಮಾಹಿತಿ ನೀಡಿತ್ತು. ಈ ಹಿನ್ನಲೆಯಲ್ಲಿ ಕಾರ್ಯಕ್ರಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.