ಬೆಂಗಳೂರು, ಮಾ. 09 (Daijiworld News/MB) : ರಾಜ್ಯಪಾಲರ ಭಾಷಣ ಸುಳ್ಳಿನ ಕಂತೆಗಳ ಸರಮಾಲೆಗಳಿಂದ ಕೂಡಿದ್ದು, ಇದರಲ್ಲಿ ಯಾವುದೇ ಸತ್ವವಿಲ್ಲದಾಗಿದೆ. ಸುಳ್ಳು ಹೇಳುವುದಕ್ಕೆ ನೊಬೆಲ್ ಪ್ರಶಸ್ತಿ ಇದ್ದರೆ, ಈ ಸರಕಾರಕ್ಕೆ ತಾನಾಗಿಯೇ ಸಿಗಲಿದೆ ಎಂದು ವಿಧಾನ ಪರಿಷತ್ನ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ್ ಅವರು ಟೀಕಿಸಿದ್ದಾರೆ.
ಸೋಮವಾರ ವಿಧಾನ ಪರಿಷತ್ನಲ್ಲಿ ರಾಜ್ಯಪಾಲರ ಭಾಷಣದ ಮೇಲೆ ಮುಂದುವರಿದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸುಳ್ಳು ಹೇಳುವುದಕ್ಕೆ ನೊಬೆಲ್ ಪ್ರಶಸ್ತಿ ಇದ್ದರೆ, ಈ ಸರಕಾರಕ್ಕೆ ತಾನಾಗಿಯೇ ಸಿಗಲಿದೆ ಎಂದು ಅವರು ಲೇವಡಿ ಮಾಡಿದರು.
ಬಿಜೆಪಿ ಸರ್ಕಾರ ನೆರೆ ವೇಳೆ ನಿರಾಶ್ರಿತರಿಗೆ ಮನೆ ಕಟ್ಟಲು 5 ಲಕ್ಷ ನೀಡುವುದಾಗಿ ಹೇಳಿದ್ದಾರೆ. ಆದರೆ ೧ ಲಕ್ಷ ಮಾತ್ರ ನೀಡಿದ್ದಾರೆ. ಅಷ್ಟು ಮಾತ್ರವಲ್ಲದೇ ಅತೀ ಹೆಚ್ಚು ಪರಿಹಾರ ನೀಡಿದಂತೆ ಬಿಂಬಿಸಲು ಯತ್ನಿಸುತ್ತಿದ್ದಾರೆ. ಕಾಮಗಾರಿಗಳು ಕಳಪೆಯಾಗಿದೆ. ಆ ಬಗ್ಗೆ ಯಾವುದೇ ನಿಗಾ ವಹಿಸಿಲ್ಲ ಎಂದು ಆರೋಪಿಸಿದರು.
ರಾಜ್ಯಪಾಲರ ಭಾಷಣದಲ್ಲಿ ಈ ಹಿಂದಿನ ಸಿದ್ಧರಾಮಯ್ಯ ಸರ್ಕಾರ ಹಾಗೂ ಮೈತ್ರಿ ಸರ್ಕಾರದ ಯೋಜನೆಗಳನ್ನು ಸೇರಿಸಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಯಾವ ಯೋಜನೆಗಳನ್ನು ರೂಪಿಸಿಲ್ಲ ಎಂದು ಆಪಾಧಿಸಿದರು.
ಮೈತ್ರಿ ಸರ್ಕಾರದಿಂದ ರಾಜೀನಾಮೆ ನೀಡಿ ಉಪಚುನಾವಣೆಯಲ್ಲಿ ಗೆದ್ದು ಸಚಿವರಾದವರಿಗೆ ಯಾವುದೇ ಹುರುಪಿಲ್ಲ. ಪ್ರಾಯಶಃ ಅವರ ಕನಸುಗಳು ನನಸಾಗಿಲ್ಲ ಎಂದು ಕಾಣುತ್ತದೆ ಎಂದು ಹೇಳಿದರು.
ಪಾಟೀಲ್ ಅವರು ಬಿಜೆಪಿ ಕಾಂಗ್ರೆಸ್ ಶಾಸಕರನ್ನು ಓಡಿಸಿಕೊಂಡು ಹೋಗಿದೆ ಎಂದು ಹೇಳಿದ್ದು ಇದಕ್ಕೆ ಬಿಜೆಪಿಯವರು ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ಪದ ಅಸಂವಿಧಾನಿಕ. ಅದನ್ನು ಕಡತದಿಂದ ತೆಗೆದು ಹಾಕಿ ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಪಾಟೀಲ್ ಅವರು ಕುಂಬಳಕಾಯಿ ಕಳ್ಳ ಅಂದರೆ ನೀವ್ಯಾಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತೀರಿ ಎಂದು ಪ್ರಶ್ನಿಸಿದರು.
ಅಷ್ಟು ಮಾತ್ರವಲ್ಲದೇ ಪಾಟೀಲ್ ಅವರು, ಪ್ರವಾಹ ಪೀಡಿತ ಪ್ರದೇಶದಲ್ಲಿ ಸರ್ಕಾರದ ಮನೆ ನಿರ್ಮಾಣ ಮಾಡುವ ಅನುದಾನ ನೀಡುವ ಸಂದರ್ಭದಲ್ಲಿ ನಮ್ಮ ಪಕ್ಷದವರನ್ನು ಕೆಟಗರಿ ಸಿ ಗೆ ಹಾಗೂ ಅಲ್ಲದೆ ಕೆಟಗರಿ ಸಿಯಲ್ಲಿ ಇರಬೇಕಾದವರನ್ನು ಎ ಗೆ ಸೇರಿಸಿದ್ದಾರೆ ಎಂದು ಆರೋಪ ಮಾಡಿದರು.