ಬೆಂಗಳೂರು, ಮಾ 9 (Daijiworld News/MSP): ಕೊರೊನಾ ಭೀತಿ ಹಿನ್ನೆಲೆಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನರ್ಸರಿಯಿಂದ 5ನೇ ತರಗತಿ ಒಳಗಿನ ಮಕ್ಕಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ರಜಾ ಘೋಷಿಸಿದ ಬೆನ್ನಲ್ಲೇ ಇದೀಗ ರಾಜ್ಯದ್ಯಾಂತ ಮಕ್ಕಳಿಗೆ ದಿಢೀರ್ ಪರೀಕ್ಷೆ ಎದುರಿಸುವ ಪರಿಸ್ಥಿತಿ ಬಂದಿದೆ.
1 ರಿಂದ 5 ನೇ ತರಗತಿವರೆಗಿನ ವಾರ್ಷಿಕ/ಸೆಮಿಸ್ಟರ್ ಪರೀಕ್ಷೆಗಳನ್ನು ಮಾರ್ಚ್ 16 ರ ಒಳಗೆ ಹಾಗೂ 6 ರಿಂದ 9 ನೇ ತರಗತಿ ಪರೀಕ್ಷೆಗಳನ್ನು ಮಾರ್ಚ್ 23 ರ ಒಳಗೆ ಕಡ್ಡಾಯವಾಗಿ ಎಲ್ಲಾ ವಾರ್ಷಿಕ ಪರೀಕ್ಷೆಮುಗಿಸಿ ರಜೆ ಘೋಷಿಸುವಂತೆ ಎಲ್ಲಾ ಬಿಇಒಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ರವಾನೆ ಮಾಡಿದೆ. ಹೀಗಾಗಿ ಇಲ್ಲಿಯವರೆಗೆ ಆರಾಮವಾಗಿದ್ದ ಮಕ್ಕಳಿಗೆ ನಾಳೆ ಅಥವಾ ನಾಡಿದ್ದಿನಿಂದಲೇ ಪರೀಕ್ಷೆ ಎದುರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಈ ನಡುವೆ ದಿಡೀರ್ ಪರೀಕ್ಷೆಯಿಂದ ಮಕ್ಕಳ ಪೋಷಕರನ್ನು ತಲೆಕೆಡಿಸಿಕೊಳ್ಳುವಂತೆ ಮಾಡುವಂತೆ ಮಾಡಿದೆ.
ಕೊರೊನಾ ಭೀತಿ ಹಿನ್ನಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯ ಶಿಕ್ಷಣ ಇಲಾಖೆ ಈ ನಿರ್ಧಾರ ಕೈಗೊಂಡಿದ್ದು, ಧಿಡೀರ್ ಪರೀಕ್ಷೆ ಎದುರಾಗುವ ಹಿನ್ನಲೆಯಲ್ಲಿ ಶಾಲಾ ಶಿಕ್ಷಕರು , ವಿದ್ಯಾರ್ಥಿಗಳು ಹಾಗೂ ಪೋಷಕರು ಚಿಂತೆಗೀಡು ಮಾಡುವಂತೆ ಮಾಡಿದೆ. ಇನ್ನು ಪೂರ್ವ ನಿಗದಿಯಂತೆ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಯಲಿದೆ.
ಇದಲ್ಲದೆ ಒಂದು ವೇಳೆ ಯಾವುದೇ ವಿದ್ಯಾರ್ಥಿ ಜ್ವರ ,ಕೆಮ್ಮು ನೆಗಡಿ ಅಥವಾ ಇತರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ಅಂತಹ ವಿದ್ಯಾರ್ಥಿಗೆ ಆರೋಗ್ಯ ಮತ್ತು ಕುಟುಂಬ ಇಲಾಖೆಯ ವತಿಯಿಂದ ತಕ್ಷಣವೇ ಸೂಕ್ತ ಚಿಕಿತ್ಸೆ ನೀಡಿ ಕಡ್ದಾಯ ರಜೆ ಘೋಷಿಸಬೇಕು ಎಂದು ಇಲಾಖೆಯ ಸುತ್ತೋಲೆಯಲ್ಲಿ ತಿಳಿಸಿದೆ.