ಬೆಂಗಳೂರು, ಮಾ 09(DaijiworldNews/SM): ಕೊರೋನಾ ವೈರಸ್ ಬಗ್ಗೆ ಜನಜಾಗೃತಿ ಮೂಡಿಸಲು ಸರಕಾರ ಏನು ಕ್ರಮ ಕೈಗೊಂಡಿದೆ ಎಂಬುದರ ಬಗ್ಗೆ ತಿಳಿಯಪಡಿಸಬೇಕು ಎಂದು ಮಂಗಳೂರು ನಗರ ಉತ್ತರ ಶಾಸಕ ಡಾ.ವೈ ಭರತ್ ಶೆಟ್ಟಿ ವಿಧಾನಸಭೆಯಲ್ಲಿ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಶೂನ್ಯವೇಳೆಯಲ್ಲಿ ಪ್ರಸ್ತಾವಿಸಿದ ಶಾಸಕ ಡಾ.ಭರತ್ ಶೆಟ್ಟಿಯವರು ಕೊರೋನಾ ವೈರಸ್ ಹಿಂದೆಯೂ ಇತ್ತು. ಆದರೆ ನೊಯಲ್ ಕೊರೋನಾ ವೈರಸ್ ಮೊದಲ ಬಾರಿಗೆ ಪತ್ತೆಯಾಗಿದೆ. ಆರು ಉಪಖಂಡಗಳಲ್ಲಿ ಅದು ಹರಡುತ್ತಿದೆ. ಚೀನಾದ ಬಳಿಕ ಜನಸಂಖ್ಯೆಯಲ್ಲಿ ಭಾರತ ದೊಡ್ಡ ರಾಷ್ಟ್ರವಾಗಿದೆ. ಇಲ್ಲಿ ಕೊರೋನಾ ಹಬ್ಬಬಾರದು. ಒಂದೊಮ್ಮೆ ಹಬ್ಬಿದರೆ ಅದನ್ನು ನಿಭಾಯಿಸಲು ಏನು ಕ್ರಮ ಕೈಗೊಳ್ಳಲಾಗುತ್ತದೆ. ಅದಕ್ಕೆ ಯಾವ ರೀತಿಯ ಪೂರ್ವ ತಯಾರಿ ಮಾಡಲಾಗಿದೆ ಎನ್ನುವುದನ್ನು ಸರಕಾರ ತಿಳಿಯಪಡಿಸಬೇಕು ಎಂದು ಹೇಳಿದರು.
ಇದುವರೆಗೆ ರಾಷ್ಟ್ರದಲ್ಲಿ 39 ಮಂದಿಗೆ ಕರೋನಾ ತಗಲಿರುವುದು ಧೃಡಪಟ್ಟಿದೆ. ರಾಜ್ಯ ಸರಕಾರದ ವತಿಯಿಂದ ಜಾಗೃತಿ ಮಾಹಿತಿ ಪ್ರಸಾರಕ್ಕೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದು ಗೊತ್ತಾಗುತ್ತಿಲ್ಲ. ಇಂತಹ ಸ್ಥಿತಿಯಲ್ಲಿ ವಿವಿಧ ವೈದ್ಯಕೀಯ ಕಾಲೇಜು ಆಸ್ಪತ್ರೆಗಳ ಸಮುದಾಯ ಆರೋಗ್ಯ ವಿಭಾಗದ ಮೂಲಕ ಶಿಬಿರಗಳನ್ನು ಏರ್ಪಡಿಸಿ ತಿಳುವಳಿಕೆ ನೀಡುವ ಅಗತ್ಯವಿದೆ ಎಂದು ಡಾ.ಭರತ್ ಶೆಟ್ಟಿ ತಿಳಿಸಿದ್ದಾರೆ.