ನವದೆಹಲಿ, ಮಾ 10 (Daijiworld News/MSP): ದೇಶದಲ್ಲಿ ಮತ್ತೆ ಕೊರೊನಾ ವೈರಸ್ ಸೋಂಕಿತರ ಹೊಸ ಪ್ರಕರಣ ಪತ್ತೆಯಾಗಿದ್ದು, ಇದುವರೆಗೂ ಸೋಂಕು ದೃಢಪಟ್ಟವರ ಸಂಖ್ಯೆ 47ಕ್ಕೇರಿದೆ. ಪಂಜಾಬ್, ಕರ್ನಾಟಕದಲ್ಲಿ ತಲಾ ಒಬ್ಬರು ಮತ್ತು ಪುಣೆಯಲ್ಲಿ ಇಬ್ಬರಿಗೆ ಸೋಂಕು ಇರುವುದು ಸೋಮವಾರ ಖಚಿತವಾಗಿದೆ ಎಂದು ಮಾನವ ಸಂಪನ್ಮೂಲ ಸಚಿವಾಲಯ ತಿಳಿಸಿದೆ.
ಇತ್ತೀಚಿಗಷ್ಟೆ ಅಮೆರಿಕಾದಿಂದ ವಾಪಾಸ್ಸಾಗಿದ್ದ ಸಾಫ್ಟ್ ವೇರ್ ಇಂಜಿನಿಯರ್ ಗೂ ಕೊರೊನಾ ಖಚಿತವಾಗಿದ್ದು ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಕರ್ನಾಟಕದಲ್ಲಿ ದಾಖಲಾದ ಮೊದಲ ಪ್ರಕರಣ ಇದಾಗಿದೆ.ಸಮಾಧಾನಕರ ಸಂಗತಿ ಎಂದರೆ ದೇಶದಲ್ಲಿ ಇದುವರೆಗೆ ಕೊರೊನಾ ವೈರಸ್ ದಾಳಿಯಿಂದ ಮೃತಪಟ್ಟ ಬಗ್ಗೆ ಯಾವುದೇ ವರದಿಯಾಗಿಲ್ಲ. ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯಲ್ಲಿ ಕಳೆದ ಭಾನುವಾರ ಆಸ್ಪತ್ರೆಯ ಪ್ರತ್ಯೇಕ ವಾರ್ಡ್ ನಲ್ಲಿ ಮೃತಪಟ್ಟ ವ್ಯಕ್ತಿಗೆ ಕೊರೊನಾ ವೈರಸ್ ಇರಲಿಲ್ಲ ಎಂದು ಕೂಡ ಸಚಿವಾಲಯ ಸ್ಪಷ್ಟನೆ ನೀಡಿದೆ.
ಇನ್ನು ಕೊರೊನಾ ಸೋಂಕು ಪೀಡಿತರ ಪ್ರಕರಣಗಳು ಹೆಚ್ಚುತ್ತಿರುವ ಮಧ್ಯೆ, ವಿದೇಶದಿಂದ ಆಗಮಿಸುವ ಪ್ರಯಾಣಿಕರನ್ನು ತೀವ್ರ ತಪಾಸಣೆ ಒಳಪಡಿಸಲಾಗುತ್ತಿದೆ. ಇನ್ನು ಸೋಂಕಿನಿಂದ ವಿಶ್ವದಾದ್ಯಂತ 3,800 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಸೋಮವಾರ ರಾತ್ರಿಯವರೆಗೆ 1,10,000 ಕ್ಕೂ ಹೆಚ್ಚು ಜನರಿಗೆ ಸೋಂಕು ಇರುವುದು ಖಚಿತವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.