ಬೀದರ್, ಮಾ. 10 (Daijiworld News/MB) : ಇಲ್ಲಿಯ ಶಾಹೀನ್ ಅನುದಾನಿತ ಉರ್ದು ಪ್ರಾಥಮಿಕ ಶಾಲೆಯಲ್ಲಿ ವಿವಾದಾತ್ಮಕ ನಾಟಕ ಪ್ರದರ್ಶಿಸಿದ ಬಳಿಕ 6ನೇ ತರಗತಿಯ ವಾರ್ಷಿಕ ಪರೀಕ್ಷೆಯಿಂದ ದೂರ ಉಳಿದಿದ್ದ ಬಾಲಕಿಗೆ ಪ್ರತ್ಯೇಕ ಪರೀಕ್ಷೆ ನಡೆಸಲು ಶಾಹೀನ್ ಶಿಕ್ಷಣ ಸಂಸ್ಥೆ ನಿರ್ಧರಿಸಿದೆ.
ಜ.21ರಂದು ನಾಟಕ ಪ್ರದರ್ಶನದ ಬಳಿಕ ದೇಶದ್ರೋಹ ಪ್ರಕರಣ ದಾಖಲಿಸಿ ಬಾಲಕಿಯ ತಾಯಿಯನ್ನು ಬಂಧಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಬಾಲಕಿಯನ್ನು ಪೊಲೀಸರು ಅನೇಕ ಬಾರಿ ವಿಚಾರಣೆ ಮಾಡಿದ್ದರಿಂದ ಆಕೆ ಆಘಾತಗೊಂಡಿದ್ದಳು. ಈ ಹಿನ್ನಲೆಯಲ್ಲಿ ಆಕೆ ಪರೀಕ್ಷೆಗೆ ಹಾಜರಾಗಿರಲಿಲ್ಲ.
ಆ ಬಳಿಕ ಶಾಹೀನ್ ಶಿಕ್ಷಣ ಸಂಸ್ಥೆಯ ಸಿಇಒ ತೌಸಿಫ್ ಮಡಿಕೇರಿ ಅವರು, "1ರಿಂದ 8ನೇ ತರಗತಿಯ ವರೆಗಿನ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸಲು ಅವಕಾಶ ಇಲ್ಲ. ಕಲಿಕಾ ಗುಣಪಟ್ಟ ಸುಧಾರಿಸಲು ಪರೀಕ್ಷೆ ನಡೆಸಲಾಗುತ್ತದೆ. ಬಾಲಕಿಯ ಎಫ್ಎ–4 ಮರು ಪರೀಕ್ಷೆ ನಡೆಸಲಾಗುವುದು" ಎಂದು ಹೇಳಿದ್ದರು.
"ಮಕ್ಕಳ ಹಕ್ಕು ಕಾಯ್ದೆಯಡಿ ಅಂತಿಮ ಪರೀಕ್ಷೆಯಲ್ಲಿ ಹಾಜರಾತಿ ಅಥವಾ ಸಾಧನೆಯ ಹೊರತಾಗಿಯೂ ವಿದ್ಯಾರ್ಥಿನಿಯನ್ನು ಮುಂದಿನ ತರಗತಿಗೆ ಕಳಿಸಲು ಅವಕಾಶವಿದೆ. ವಿದ್ಯಾರ್ಥಿನಿಯ ಹಾಜರಾತಿಯಲ್ಲಿ ಸಮಸ್ಯೆ ಇಲ್ಲ. ಪ್ರತಿಭಾವಂತಳೂ ಆಗಿರುವ ಕಾರಣ ಸಂಸ್ಥೆಯಲ್ಲಿನ ಶೈಕ್ಷಣಿಕ ಗುಣಮಟ್ಟ ಕಾಯ್ದುಕೊಳ್ಳಲು ವಿದ್ಯಾರ್ಥಿನಿಗೆ ಪ್ರತ್ಯೇಕ ಪರೀಕ್ಷೆ ನಡೆಸಲಾಗುವುದು" ಎಂದು ತಿಳಿಸಿದ್ದಾರೆ.
ಹಾಗೆಯೇ ಈ ಬಗ್ಗೆ ಸ್ಫಷ್ಟನೆ ನೀಡಿರುವ ಶಾಹೀನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಖದೀರ್ "6ನೇ ತರಗತಿಯ 4 ಪರೀಕ್ಷೆ ಕಳೆದ ತಿಂಗಳು ಮುಗಿದಿದೆ. ವಾರ್ಷಿಕ ಪರೀಕ್ಷೆ ಇನ್ನೂ ಆರಂಭವಾಗಿಲ್ಲ" ಎಂದು ಹೇಳಿದ್ದಾರೆ.
30 ವರ್ಷಗಳಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಹೆಸರು ಉಳಿಸಿಕೊಂಡು ಬಂದಿರುವ ನಮ್ಮ ಶಾಲೆಯಲ್ಲಿ ಪ್ರಮಾದ ನಡೆದು ಹೋಗಿದೆ. ನಾನೂ ಇದೊಂದು ಸಣ್ಣ ತಪ್ಪು ಎಂದು ಒಪ್ಪಿಕೊಳ್ಳುತ್ತೇನೆ. ಆದರೆ, ದೇಶದ್ರೋಹದಂತಹ ಕೆಲಸ ಮಾಡಿಲ್ಲ. ಮಾಡುವುದೂ ಇಲ್ಲ" ಎಂದಿದ್ದಾರೆ.
"ಬಾಲಕಿ ತನ್ನ ತರಗತಿ ಅಧ್ಯಾಪಕರಲ್ಲಿ ಪೊಲೀಸರು ಪದೇ ಪದೇ ವಿಚಾರಣೆ ನಡೆಸಿದ್ದರಿಂದ ಗಾಬರಿಗೊಂಡು ಪರೀಕ್ಷೆಗೆ ಹಾಜರಾಗಿರಲಿಲ್ಲ ಎಂದು ಹೇಳಿದ್ದಳು. ಈಗ ಬಾಲಕಿಯ ತಾಯಿ ನಜಮುನ್ನಿಸಾ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಮರು ಪರೀಕ್ಷೆಗೆ ಅವಕಾಶ ಕಲ್ಪಿಸುವ ವಿಷಯ ತಿಳಿದು ಬಾಲಕಿ ಖುಷಿಯಾಗಿದ್ದಾಳೆ" ಎಂದು ಅವರು ತಿಳಿಸಿದ್ದಾರೆ.
"ನಮ್ಮ ಸಂಸ್ಥೆಯ ಉದ್ದೇಶಗಳಲ್ಲಿ ರಾಷ್ಟ್ರೀಯ ಏಕತೆ ಕೂಡಾ ಒಂದು. ಎಲ್ಲ ಸಮುದಾಯದವರಿಗೂ ನಮ್ಮ ಸಂಸ್ಥೆಯಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಆಡಳಿತ ಮಂಡಳಿಯ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿರುವುದರ ಹಿಂದೆ ಈ ಶಿಕ್ಷಣ ಸಂಸ್ಥೆಗೆ ಕೆಟ್ಟ ಹೆಸರು ತರುವ ಉದ್ದೇಶವಿದೆ. ಇದರಲ್ಲಿ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡವಿದೆ" ಎಂದು ಆರೋಪಿಸಿದ್ದಾರೆ.
ದೇಶದ್ರೋಹ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ ಬಳಿಕ ಮುಖ್ಯಶಿಕ್ಷಕಿ ಫರೀದಾಬೇಗಂ ಅವರನ್ನು ಅಮಾನತು ಮಾಡಲಾಗಿತ್ತು. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಅವರ ಅಮಾನತು ಆದೇಶ ವಾಪಸ್ ಪಡೆಯಲಾಗಿದ್ದು, ಅವರು ಸೇವೆಗೆ ಬರುತ್ತಿದ್ದಾರೆ.