ಭೋಪಾಲ್, ಮಾ. 10 (Daijiworld News/MB) : ಮಧ್ಯಪ್ರದೇಶದ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಕಮಲನಾಥ್ ಸಂಪುಟದ ಎಲ್ಲ ಸಚಿವರೂ ಸೋಮವಾರ ರಾತ್ರಿ ರಾಜೀನಾಮೆ ನೀಡಿದ್ದಾರೆ.
ಕಮಲನಾಥ್ ಅವರು ಮಂಗಳವಾರ ಪಕ್ಷದ ಶಾಸಕರೊಂದಿಗೆ ಚರ್ಚಿಸಲು ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ.
ಕಮಲನಾಥ್ ಅವರು ಸಂಪುಟ ಪುನಾರಚನೆಗೆ ತೀರ್ಮಾನ ಮಾಡಿದ್ದು ಜ್ಯೋತಿರಾಧಿತ್ಯ ಸಿಂಧ್ಯ ಬೆಂಬಲಿಗರಿಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದಾರೆ ಎಂದು ಹೇಳಲಾಗಿದ್ದು ಈ ಕಾರಣದಿಂದಾಗಿ ಎಲ್ಲಾ ಸಚಿವರುಗಳಿಂದ ರಾಜೀನಾಮೆ ಪಡೆಯಲಾಗಿದೆ.
ಈ ಕ್ಷೀಪ್ರ ಬೆಳವಣಿಗೆಯ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವಾಣ್, "ಇದು ಕಾಂಗ್ರೆಸ್ನ ಆಂತರಿಕ ವಿಚಾರ. ನಾನು ಮಾತನಾಡುವುದಿಲ್ಲ. ನಾವು ಸರ್ಕಾರವನ್ನು ಬೀಳಿಸುವ ಕಾರ್ಯಕ್ಕೆ ಕೈಹಾಕುವುದಿಲ್ಲ ಎಂದು ಈ ಮೊದಲೇ ಹೇಳಿದ್ದೇವೆ" ಎಂದಿದ್ದಾರೆ.